ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಇಂದೇ ತಿರ್ಮಾನ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ.
ಅರುಣ್ ಸಿಂಗ್ ಅವರು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ್ದು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಯ್ಕೆ ಇಂದೇ ತಿರ್ಮಾನವಾಗಲಿದೆ ಎಂದು ತಿಳಿಸಿದರು.
ಇಂದು ಸಂಜೆ ಶಾಸಕಾಂಗ ಸಭೆ ನಡೆಯುತ್ತದೆ. ಧರ್ಮೇಂದ್ರ ಪ್ರಧಾನ್ ಮತ್ತು ಕಿಶಾನ್ ರೆಡ್ಡಿ ಬರ್ತಿದ್ದಾರೆ. ಸಭೆಯ ಬಳಿಕ ಸಿಎಂ ಹೆಸರು ಬಹಿರಂಗ ಮಾಡ್ತೀವಿ ಎಂದು ಸಿಂಗ್ ಹೇಳಿದರು.
ಇದಕ್ಕೂ ಮುನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಮಾತನಾಡಿದ ಅರುಣ್ ಸಿಂಗ್, ಕಳೆದ ಎರಡು ವರ್ಷದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಒಳ್ಳೆಯ ಕೆಲಸ ನಡೆದಿದೆ. ಎಲ್ಲ ವರ್ಗ, ಕ್ಷೇತ್ರದಲ್ಲಿ ಸರ್ಕಾರದಿಂದ ಉತ್ತಮ ಕೆಲಸಗಳಾಗಿವೆ ಎಂದರು.
ಇನ್ನು ಯಡಿಯೂರಪ್ಪನವರ ಮಾರ್ಗದರ್ಶನ ಮತ್ತು ಸಹಕಾರ ಪಡೆಯುತ್ತೇವೆ. ಪಕ್ಷ ಸಂಘಟನೆಗೆ ಯಡಿಯೂರಪ್ಪನವರ ಮಾರ್ಗದರ್ಶನ ಅಗತ್ಯವಿದೆ. ಸಂಸದೀಯ ಮಂಡಳಿ ನಿರ್ದೇಶನದಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನ ಆಯ್ಕೆ ನಡೆಯಲಿದೆ ಎಂದರು.