ಹುಕ್ಕೇರಿ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಕೇಶ್ವರ ಘಟಕದ ಚಾಲಕರು ಹಾಗೂ ನಿರ್ವಾಹಕರಿಗೆ ಎರಡು ತಿಂಗಳ ಸಂಬಳ ನೀಡದೆ ಘಟಕದ ವ್ಯವಸ್ಥಾಪಕರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುಷ್ಕರ ನಡೆಸಿದ ಏಪ್ರಿಲ್ 7ರಿಂದ 21ರವರೆಗಿನ ಅವಧಿಯಲ್ಲಿ ಎಲ್ಲ ನೌಕರರಿಗೂ ವೇತನವನ್ನು ನೀಡಿಲ್ಲ. ಆದರೆ ಏಪ್ರಿಲ್ 22ರಂದು ಕರ್ತವ್ಯಕ್ಕೆ ಹಾಜರಾದ ಹಲವು ನೌಕರರಿಗೆ ಜೂನ್ ತಿಂಗಳವರೆಗೂ ಗೈರು ಹಾಜರಿ ಎಂದು (ಲಾಕ್‌ಡೌನ್ ಅವಧಿಯನ್ನು) ತೋರಿಸಿ ವೇತನ ಬಿಡುಗಡೆ ಮಾಡದಂತೆ ಸಂಕೇಶ್ವರ ಘಟಕದ ವ್ಯವಸ್ಥಾಪಕ ನಾಡಗೌಡರ ಅವರು ತಡೆ ನೀಡುತ್ತಿದ್ದಾರೆ ಎಂದು ಘಟಕದ ನೌಕರರು ಆರೋಪಿಸಿದ್ದಾರೆ.
ಕಳೆದ ಏಪ್ರಿಲ್ 22ರಿಂದ ಏಪ್ರಿಲ್ 27ರವರೆಗೂ ರೂಟ್‌ಮೇಲೆ ಹೆಚ್ಚು ಬಸ್‌ಗಳ ಕಾರ್ಯಾಚರಣೆ ಮಾಡದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆಂದು ಡಿಪೋಗೆ ಹಾಜರಾದ 104 ಸಿಬ್ಬಂದಿಗಳಿಂದ ಹಾಜರಿ ಪುಸ್ತಕಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.
ಈ ನಡುವೆ ಏಪ್ರಿಲ್ 27ರ ಬಳಿಕ ರಾಜ್ಯಾದ್ಯಂತ ಕೊರೊನಾ ಲಾಕ್‌ಡೌನ್ ಜಾರಿಯಾದ್ದರಿಂದ ಎಲ್ಲ ನೌಕರರಿಗೂ ವೇತನ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ನಮಗೆ ಏಪ್ರಿಲ್ 22ರಿಂದ ಜೂನ್ 21ರವರೆಗಿನ ಸಂಬಳ ಬಿಡುಗಡೆ ಮಾಡಿಸದೆ ಡಿಎಂ ದರ್ಪ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಏಪ್ರಿಲ್ 22ರಿಂದ ಡ್ಯೂಟಿಗೆ ಹಾಜರಾಗಿದ್ದೇವೆ ಆ ವೇಳೆ ಹೆಚ್ಚಾಗಿ ಬಸ್‌ಗಳ ಕಾರ್ಯಾಚರಣೆ ಮಾಡದ ಹಿನ್ನೆಲೆಯಲ್ಲಿ ನಮ್ಮಿಂದ ಹಾಜರಿ ಪುಸ್ತಕಕ್ಕೆ ಸಹಿ ಹಾಕಿಸಿಕೊಂಡಿದ್ದರೂ ಗೈರು ಹಾಜರಿ ಎಂದು ತೋರಿಸಿದ್ದಾರೆ.
ಇನ್ನು ಡಿಪೋ ವ್ಯವಸ್ಥಾಪಕರ ಈ ಎಲ್ಲ ವಿಚಾರಗಳನ್ನು ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಇನ್ನು ನಮ್ಮ ದುಡಿಮೆ ಸಂಬಳದಲ್ಲಿ ಡಿಎಂಗೆ ಕಮಿಷನ್ ಕೊಟ್ಟರೆ ಮಾತ್ರ ವೇತನ ಬಿಡುಗಡೆ ಮಾಡಿಸಿಕೊಡುತ್ತಾರೆ ಎಂಬ ಆರೋಪವು ಕೇಳಿಬಂದಿದೆ.
ಹೀಗಾಗಿ ಸರ್ಕಾರ ಇತ್ತ ಗಮನ ಹರಿಸಿ ಇಂತಹ ಲಂಚಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಿಷ್ಠಾವಂತ ಅಧಿಕಾರಿಗಳನ್ನು ನೇಮಕ ಮಾಡಬೇಕು. ಜೊತೆಗೆ ಸಿಬ್ಬಂದಿಗಳ ಸಂಬಳ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಕೇಶ್ವರ ಘಟಕ 104 ಮಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಇವರು ಬರಿ ಸುಳ್ಳು ಆರೋಪ ಮಾಡಿದ್ದಾರೆ. ನಾವು ನೌಕರರಿಗೆ ಯಾವುದೇ ಕಿರುಕುಳ ನೀಡುತ್ತಿಲ್ಲ. ಜತೆಗೆ ಈ 104 ನೌಕರರು ಗೈರಾಗಿದ್ದರೂ ವೇತನ ಬಿಡುಗಡೆ ಮಾಡಿಸಿ ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ. ಒಟ್ಟಾರೆ ನೌಕರರು ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು.
l ನಾಡಗೌಡರ, ಡಿಪೋ ವ್ಯವಸ್ಥಾಪಕ, ಸಂಕೇಶ್ವರ ಘಟಕ