ಬೆಳಗಾವಿ: ಒಂದೇ ಪಕ್ಷದಲ್ಲಿ ಇಬ್ಬರು ಸ್ಪರ್ಧೆಮಾಡುತ್ತಿದ್ದಾರೆ. ಹೀಗಾಗಿ ಸವಾಲಿರುವುದು ಬಿಜೆಪಿಗೇ ಹೊರತು, ನಮಗಲ್ಲ. ನಮ್ಮಲ್ಲಿ ಗೊಂದಲವಿಲ್ಲ. ಒಬ್ಬರೇ ಅಭ್ಯ ರ್ಥಿ ಇದ್ದಾರೆ. ಹೀಗಾಗಿ ಗೊಂದಲವಿರುವುದು ಬಿಜೆಪಿಯಲ್ಲಷ್ಟೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಯ ವರಿಷ್ಠರಿಂದ ಸ್ಥಾನಮಾನದ ಭರವಸೆ ಸಿಕ್ಕರೆ ಲಖನ್ ಜಾರಕಿಹೊಳಿ ವಿಧಾನಪರಿಷತ್ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿಯಲೂಬಹುದು ಎಂದು ಸಹೋದರರೂ ಆಗಿರುವ ಅಭಿಪ್ರಾಯಪಟ್ಟರು.
ಇನ್ನು ಕಾಂಗ್ರೆಸ್ ಪಕ್ಷದಿಂದ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ನಾವು ಒಂದು ಮತವಷ್ಟೆ ಕೇಳುತ್ತೇವೆ. ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರಮಾಡಿದ್ದೇವೆ ಎಂದರು.
ಲಖನ್ ಸ್ಪರ್ಧೆ ಅವರ ವೈಯಕ್ತಿಕ ವಿಚಾರ. ಆದರೆ, ನಾವು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಸುತ್ತೇ ವೆ. ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಅದನ್ನೇ ಪ್ರಚಾರದಲ್ಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ಬಿಜೆಪಿಯ ರಮೇಶ ಜಾರಕಿಹೊಳಿ ಮತ್ತು ಲಖನ್ ಮತದಾರರಿಗೆ ಹಣ ನೀಡಿ ನನ್ನನ್ನು ಸೋಲಿಸಿದರು. ಆನೋವು ನನಗೂ ಇದೆ. ಕಾರ್ಯಕರ್ತರಲ್ಲೂ ಇದೆ ಎಂದರು.
ಈಗ ಬಿಜೆಪಿಯಲ್ಲಿರುವ ಲಖನ್ ನಾಮಪತ್ರ ಸಲ್ಲಿಸಬಹುದು. ಆದರೆ, ಕಣದಲ್ಲಿ ಉಳಿಯುತ್ತಾರೆಯೇ ಎನ್ನುವುದು ಅನುಮಾನ. ಕಣದಿಂದ ಹಿಂದೆ ಸರಿಯಲೂಬಹುದಲ್ಲವೇ? ನಾಮಪತ್ರ ವಾಪಸ್ಗೆ ಅವಕಾಶವಿದೆ.
ಅವರ ಪಕ್ಷದವರು ಸ್ಥಾನಮಾನದ ಭರವಸೆ ಕೊಟ್ಟರೆ ಹಿಂದೆ ಸರಿಯಬಹುದು. ಅವರು ಬೇರೆ ಪಕ್ಷದಲ್ಲಿರುವುದರಿಂದ ಸ್ಪರ್ಧಿಸಿ ಅಥವಾ ಸ್ಪರ್ಧಿಸಬೇಡಿ ಎಂದು ನಾನು ಹೇಳಲಾಗುವುದಿಲ್ಲ. ಕುಟುಂಬದ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಮೊದಲು ಪಕ್ಷ, ನಂತರ ಕಾರ್ಯತಂತ್ರ ಎಂದರು.
ಲಕ್ಷ್ಮಿ ಹೆಬ್ಬಾಳಕರ–ಜಾರಕಿಹೊಳಿ ಸಹೋದರರ ಸವಾಲಿದು ಎನ್ನುವುದೇನೂ ಇಲ್ಲ. ಎಲ್ಲ ಸಹೋದರರು ಒಂದೇ ಕಡೆ ಏನಿಲ್ಲವಲ್ಲ? ನಾನು ಈ ಕಡೆ (ಕಾಂಗ್ರೆಸ್) ಇದ್ದೇ ನಲ್ಲವೇ?. ರಾಜಕೀಯದಲ್ಲಿ ಇರುವವರೆಗೂ ಸವಾಲುಗಳನ್ನು ಎದುರಿಸಲೇಬೇಕು. ಸಹೋದರರ ಸವಾಲು, ರಾಜಕೀಯ ಸವಾಲು ಮೊದಲಾದವು ಇದ್ದದ್ದೆ ಎಂದು ಹೇಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಇದ್ದರು.