ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ತನಿಖೆಯನ್ನು ವಿಶೇಷ ತನಿಖಾದಳ (ಎಸ್ ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಮುಂದುವರಿಸುವ ವಿಚಾರವಾಗಿ ಹೈಕೋರ್ಟ್ ಸರ್ಕಾರದಿಂದ ವಿವರಣೆ ಕೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನ ಅನುಮತಿ ಇಲ್ಲದೇ ಯಾವುದೆ ತನಿಖೆ ಮುಂದುವರಿಯುವುದಕ್ಕೆ ಹಾಗೂ ಅಂತಿಮ ವರದಿಯನ್ನು ಸಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾ. ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರಿದ್ದ ದ್ವಿಸದಸ್ಯ ಪೀಠ, ಮೇ1 ರಿಂದ ರಜೆಯಲ್ಲಿರುವ ಎಸ್ಐಟಿ ಮುಖ್ಯಸ್ಥ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ತನಿಖೆಯ ಪ್ರಗತಿಯನ್ನು ಗಮನಿಸಿದ್ದು ಈ ವಿವರಣೆ ಕೇಳಿದೆ.
ಕೋರ್ಟ್ ಕೇಳಿರುವ ಪ್ರಶ್ನೆಗೆ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸುವುದಕ್ಕೂ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಪಿಐಎಲ್ ಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಅಶ್ಲೀಲ ಸಿಡಿ ತಯಾರಿಸಿ ನನಗೆ ಬ್ಲಾಕ್ ಮೇಲ್: ಆರೋಪ
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿರಪರಾಧಿಯಾಗಿ ಹೊರ ಬಿದ್ದಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಎಸ್ಐಟಿ ಮುಂದಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂತ್ರಸ್ತ ಯುವತಿಗೆ ಕೆಲಸದ ಅಮಿಷ ತೋರಿ ಲೈಂಗಿಕವಾಗಿ ದೌರ್ಜನ್ಯ ಎಸಗಿಲ್ಲ. ಬದಲಿಗೆ ಜಾರಕಿಹೊಳಿಯನ್ನು ಖೆಡ್ಡಾಗೆ ಬೀಳಿಸಿ ಸುಲಿಗೆಗೆ ಯತ್ನಿಸಿದ ಸಂಬಂಧ ಸಂತ್ರಸ್ತ ಯುವತಿ ಸೇರಿ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್ಐಟಿ ತನಿಖಾ ತಂಡ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನನಗೆ ಕೆಲಸದ ಅಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಸಂತ್ರಸ್ತ ಯುವತಿ ಆರೋಪಿಸಿ ದೂರು ನೀಡಿದ್ದರು. ಅಶ್ಲೀಲ ಸಿಡಿ ತಯಾರಿಸಿ ನನಗೆ ಬ್ಲಾಕ್ ಮೇಲ್ ಮಾಡಿದ್ದರು ಎಂದು ಆರೋಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದರು. ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಜಲ ಸಂಪನ್ಮೂಲ ಖಾತೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು.
ಸಂತ್ರಸ್ತ ಯುವತಿಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿಲ್ಲ. ಸಂತ್ರಸ್ತ ಯುವತಿ ಇಂಜಿನಿಯರಿಂಗ್ ಪದವಿಯನ್ನೇ ಪೂರ್ಣಗೊಳಿಸಿಲ್ಲ. ಎರಡನೇ ವರ್ಷದಲ್ಲಿಯೇ ಇಂಜಿನಿಯರಿಂಗ್ ಪದವಿ ನಿಲ್ಲಿಸಿದ್ದಾಳೆ.
ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯನ್ನು ಡ್ಯಾಮ್ ಶ್ಯೂಟ್ ಮಾಡುವ ವಿಚಾರವಾಗಿ ಭೇಟಿ ಮಾಡಿದ್ದಾರೆ. ಈ ಪ್ರಸ್ತಾಪ ಕುರಿತು ಪರಿಶೀಲನೆ ಮಾಡಲು ಜಾರಕಿಹೊಳಿ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಡ್ರೋನ್ ಹಾಗೂ ಡಾಕ್ಯುಮೆಂಟರಿ ಬಗ್ಗೆ ಯುವತಿ ಸಾಮಾನ್ಯ ಜ್ಞಾನ ಹೊಂದಿರಲಿಲ್ಲ.
ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಲು ಪ್ರತ್ಯೇಕ ಮೊಬೈಲ್ ನಂಬರ್‌ನ್ನು ಸಂತ್ರಸ್ತ ಯುವತಿಗೆ ಶಂಕಿತ ಆರೋಪಿಗಳು ನೀಡಿದ್ದರು. ಮೂವರು ಆರ್.ಟಿ. ನಗರದ ಪಿಜಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಜಾರಕಿಹೊಳಿಯನ್ನು ಸಂಪರ್ಕಿಸಲು ಬಳಸಿದ್ದ ಮೊಬೈಲ್ ಕೂಡ ತನಿಖಾ ತಂಡಕ್ಕೆ ಸಿಕ್ಕಿದೆ. ರಮೇಶ್ ಜಾರಕಿಹೊಳಿಯನ್ನು ಸಂತ್ರಸ್ತ ಯುವತಿ ಭೇಟಿ ಮಾಡಿದಾಗಲೆಲ್ಲಾ ಆಕೆಯ ಸಂಪರ್ಕದಲ್ಲಿ ಶಂಕಿತ ಆರೋಪಿಗಳು ಇದ್ದರು.
ಸದ್ಯ ತನಿಖೆ ಪೂರ್ಣಗೊಂಡಿದ್ದು, ಹೈಕೋರ್ಟ್ ಗಮನಕ್ಕೆ ಎಸ್ಐಟಿ ತಂದಿದೆ. ನ್ಯಾಯಾಲಯ ಅನುಮತಿ ನೀಡಿದ ಕೂಡಲೇ ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಂತಿಮ ವರದಿಯನ್ನು ಅಧೀನ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಎಸ್ಐಟಿ ಹೇಳಿದೆ.