ಸೆ. 27ರ ರೈತರ ಹೋರಾಟ ಭಾರತ್ ಬಂದ್‌ಗೆ ರಾಜ್ಯ ಎಎಪಿ ಸಾಥ್ : ಜಗದೀಶ್ ವಿ.ಸದಂ
ಬೆಂಗಳೂರು: ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಸೆಪ್ಟೆಂಬರ್ 27ರ ಭಾರತ್ ಬಂದ್ ಹೋರಾಟಕ್ಕೆ ಕರ್ನಾಟಕದ ಆಮ್ ಆದ್ಮಿ ಪಾರ್ಟಿ ಬೆಂಬಲ ಘೋಷಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂದಾಜು 300 ದಿನಗಳಿಂದ ಅನ್ನದಾತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದೇ ಮೊಂಡುತನ ಪ್ರದರ್ಶಿಸುತ್ತಿದೆ. ಲೋಕಸಭೆಯಲ್ಲಿ ಬಹುಮತವಿದೆ ಎಂಬ ಮದದಲ್ಲಿ ಕಾಯಿದೆಗಳಿಗೆ ಮನಸೋ ಇಚ್ಛೆ ತಿದ್ದುಪಡಿ ತಂದಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ದೊಡ್ಡದೊಡ್ಡ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು, ಅವರು ನೀಡುವ ಹಣದಿಂದ ಚುನಾವಣೆ ಹಾಗೂ ಆಪರೇಷನ್ ಕಮಲ ನಿಭಾಯಿಸುವ ಬಿಜೆಪಿಗೆ ಅನ್ನದಾತರ ಹಿತಾಸಕ್ತಿ ಬೇಕಾಗಿಲ್ಲ ಎಂದು ಟೀಕಿಸಿದ್ದಾರೆ.
ಕೃಷಿಗೆ ಸಂಬಂಧಿಸಿದ ಮಸೂದೆಗಳಿಗೆ ತಿದ್ದುಪಡಿ ತಂದು ರೈತರ ಬದುಕಿನೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ಎಎಪಿಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 27ರಂದು ಬೆಂಗಳೂರು ನಗರ, ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯಲಿರುವ ಪ್ರತಿಭಟನೆಗಳಿಗೆ ಆಮ್ ಆದ್ಮಿ ಪಾರ್ಟಿಯ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಲಿದ್ದಾರೆ.
ರಾಜ್ಯದ ನೂರಾರು ಸಂಘಟನೆಗಳು ಅನ್ನದಾತರಿಗೆ ಬೆಂಬಲ ಸೂಚಿಸುವ ಸಾಧ್ಯತೆಯಿದ್ದು, ರೈತರ ಹೋರಾಟ ಯಶಸ್ವಿಯಾಗುವ ದೃಢ ವಿಶ್ವಾಸವಿದೆ ಎಂದು ಜಗದೀಶ್ ವಿ. ಸದಂ ಹೇಳಿದ್ದಾರೆ.