ಬೆಂಗಳೂರು: ವಿಧಾನಸಭಾ ಚುನಾವಣೆಯ ಬೆಂಗಳೂರು ನಗರದಲ್ಲಿನ ಪ್ರಚಾರಕ್ಕೆ ʻಪೊರಕೆಯೇ ಪರಿಹಾರʼ ಎಂಬ ಯಾತ್ರೆಯ ಮೂಲಕ ಫೆಬ್ರವರಿ 15ರ ಬುಧವಾರದಂದು ಚಾಲನೆ ನೀಡಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದಿಂದ ಯಾತ್ರೆ ಆರಂಭವಾಗಲಿದೆ. ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ್ ರಾವ್ ವೃತ್ತದ ಮೂಲಕ ಫ್ರೀಡಂ ಪಾರ್ಕ್ ತಲುಪಿ, ಅಲ್ಲಿ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಸ್ವಚ್ಛತೆ, ಶಿಕ್ಷಣ, ಆರೋಗ್ಯ, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಮ್ ಆದ್ಮಿ ಪಾರ್ಟಿಯೊಂದೇ ಪರಿಹಾರವಾಗಿದೆ. ಇದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ʻಪೊರಕೆಯೇ ಪರಿಹಾರʼ ಹೆಸರಿನಲ್ಲಿ ಯಾತ್ರೆ ಆಯೋಜಿಸಲಾಗಿದೆ” ಎಂದು ವಿವರಿಸಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಇದೇ ಫೆಬ್ರವರಿ 15ರಂದು ನಡೆಯಲಿರುವ ಯಾತ್ರೆಯಲ್ಲಿ ಪಕ್ಷದ ರಾಜ್ಯ ಹಾಗೂ ಬೆಂಗಳೂರು ಮಟ್ಟದ ಪದಾಧಿಕಾರಿಗಳು, ಸ್ಪರ್ಧಾಕಾಂಕ್ಷಿಗಳು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಲಿದ್ದಾರೆ ಎಂದರು.
ಇನ್ನು ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಡಳಿತದಿಂದ ಕರ್ನಾಟಕದ ಜನರು, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಜನರು ಬೇಸತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯೊಂದೇ ರಾಜ್ಯದ ಜನತೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೆಂಬುದು ಅವರಿಗೆ ಮನವರಿಕೆ ಆಗುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ನೀಡುತ್ತಿರುವ ಜನಪರ ಆಡಳಿತವನ್ನು ಕರ್ನಾಟಕದಲ್ಲೂ ಕಾಣಬೇಕೆಂದು ಜನತೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಉಪಸ್ಥಿತರಿದ್ದರು.