ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಕುರಿತು ಚರ್ಚಿಸಲು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಮಾ.8ರಂದು (ಬುಧವಾರ) ವಿಧಾನಸೌಧದಲ್ಲಿ ಆಯೋಜಿಸಲಾಗಿದೆ.
ನಾಳೆ (ಮಾ.8) ಸಂಜೆ ವಿಧಾನಸೌಧ, 3ನೇ ಮಹಡಿ, ಕೊಠಡಿ ಸಂಖ್ಯೆ-313 ರಲ್ಲಿ ಸಭೆ ನಿಗದಿಪಡಿಸಿದ್ದು, ಎಲ್ಲ ಕಾರ್ಮಿಕ ಸಂಘಟನೆಗಳ ವತಿಯಿಂದ ಸ್ಥಳಾವಕಾಶದ ದೃಷ್ಟಿಯಿಂದ ಒಬ್ಬೊಬ್ಬ ಮುಖಂಡರು ಮಾತ್ರ ಸಭೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಇನ್ನು ಸಾರಿಗೆ ನೌಕರರ ವೇತನ ಹೆಚ್ಚಳವನ್ನು ಅಗ್ರಿಮೆಂಟ್ ಮೂಲಕವೇ ಮಾಡಬೇಕು ಎಂದು ಪಟ್ಟು ಹಿಡಿದಿರುವ ಸಂಘಟನೆಗಳು ಮತ್ತು ಸರ್ಕಾರಿ ನೌಕರರ ಸರಿ ಸಮಾನ ವೇತನವನ್ನು ವೇತನ ಆಯೋಗ ಮಾದರಿಯಲ್ಲೇ ನೀಡಬೇಕು ಎಂದು ಪಟ್ಟು ಹಿಡಿದಿರುವ ಸಂಘಟನೆಗಳ ಮುಖಂಡರನ್ನು ಬೇರೆ ಬೇರೆಯಾಗಿಯೇ ಕರೆದು ಸಭೆ ನಡೆಸಲಾಗುತ್ತಿದೆ.
ಹೀಗಾಗಿ ನಾಳೆ ಸಂಜೆ ವಿಧಾನ ಸೌಧದಲ್ಲಿ ನಡೆಯಲಿರುವ ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಕುರಿತು ಚರ್ಚಿಸುವ ಸಭೆ ಅಗ್ರಿಮೆಂಟ್ ಮೂಲಕವೇ ಮಾಡಬೇಕು ಎಂದು ಪಟ್ಟು ಹಿಡಿದಿರುವ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಮೊದಲು ಸಚಿವರು ಸಭೆ ನಡೆಸಿ ಚರ್ಚಿಸಲಿದ್ದಾರೆ.
ಆ ಬಳಿಕ 2ನೆಯದಾಗಿ ನಾಲ್ಕು ವರ್ಷಕ್ಕೊಮ್ಮೆ ಮುಷ್ಕರ, ಅಮಾನತು, ವಜಾ, ಪೊಲೀಸ್ ಪ್ರಕರಣಗಳಂತಹ ರಗಳೆಗಳು ನಮ್ಮ ನೌಕರರಿಗೆ ಬೇಡ, ಹೀಗಾಗಿ ನೌಕರರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಆದ್ದರಿಂದ ಸರ್ಕಾರಿ ನೌಕರರ ಸರಿ ಸಮಾನ ವೇತನದಂತೆ ವೇತನ ಆಯೋಗ ಮಾದರಿಯಲ್ಲಿ ಕೊಡಬೇಕು ಎಂದು ಪಟ್ಟು ಹಿಡಿದಿರುವ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ.
ಒಟ್ಟಾರೆ, ಸರ್ಕಾರದ ಮಟ್ಟದಲ್ಲಿ ಈಗ ಸಾರಿಗೆ ನೌಕರರ ವೇತನ ಸಂಬಂಧ ಸಭೆ ಮೇಲೆ ಸಭೆಗಳನ್ನು ಆಯೋಜಿಸುತ್ತಿದ್ದು, ಇದನ್ನು ಗಮನಿಸಿದರೆ ಅತೀ ಶೀಘ್ರದಲ್ಲೇ ಸರ್ಕಾರ ಸಾರಿಗೆ ನೌಕರರಿಗೆ ಅತೀ ಶೀಘ್ರದಲ್ಲೇ ಸಿಹಿಸುದ್ದಿ ನೀಡುವುದು ಬಹುತೇಕ ಖಚಿವಾಗುತ್ತಿದೆ ಎಂದೇ ಹೇಳಬಹುದು.
ನಾಳೆ ನಡೆಯುವ ಸಭೆಗಳ ಹೊರತಾಗಿ ಸರ್ಕಾರ ತಾನೇ ಕೊಟ್ಟಿರುವ ಭರವಸೆಯನ್ನು ಅಂದರೆ ವೇತನ ಆಯೋಗ ಮಾದರಿಯಲ್ಲಿ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವುದಕ್ಕೆ ಈಗಾಗಲೇ ಸಜ್ಜಾಗಿರುವಂತೆಯೇ ಅದನ್ನು ಘೋಷಣೆ ಮಾಡುತ್ತದೆಯೋ ಇಲ್ಲ ಈ ಹಿಂದಿನಿಂದಲೂ ಇರುವಂತೆ ಅಗ್ರಿಮೆಂಟ್ ಮಾಡುವ ಮೂಲಕ ಕೊಟ್ಟ ಮಾತನ್ನು ತಪ್ಪುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.