ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೊರೊನಾ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಡೆದುಕೊಳ್ಳಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಬಾರಿಗೆ ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 8ರಂದು ಮೊದಲ ಹಂತದ ಲಸಿಕೆ ಪಡೆದಿದ್ದೆ. ಅದನ್ನು ಪಡೆದು 28 ದಿನಗಳು ಆಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಲಸಿಕೆಯನ್ನು ಇಂದು ಪಡೆದಿದ್ದೇನೆ. ಇದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಇನ್ನು ಲಸಿಕೆ ತೆಗೆದುಕೊಂಡ ನನಗೆ ಯಾವುದೇ ಅಡ್ಡ ಪರಿಣಾಮ ಉಂಟಾಗಲಿಲ್ಲ. ಲಸಿಕೆ ಪಡೆದ ಕೆಲವೊಬ್ಬರಿಗೆ ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಜ್ವರ ಕಾಣಿಸಿಕೊಂಡರೆ ಅದಕ್ಕೆ ಮಾತ್ರೆಯನ್ನು ಸಹ ಉಚಿತವಾಗಿ ವೈದ್ಯರೆ ನೀಡುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಹೊಸದಾಗಿ ಲಸಿಕೆ ಪಡೆಯಲು ಬಂದಾಗ ಭಯವಾಗುವುದು ಸಾಮಾನ್ಯ. ಆದರೆ, ನಮ್ಮ ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಪೌರಕಾರ್ಮಿಕರ ವರೆಗೂ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳನ್ನು ಸಹ ಹೆಚ್ಚಾಗಿ ತೆರೆಯಲಾಗುತ್ತಿದ್ದು, ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕುಟುಂಬದ ಎಲ್ಲರೂ ಲಸಿಕೆಯನ್ನು ಇಂದು ಪಡೆದುಕೊಂಡರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅವರ ತಾಯಿ ಶ್ರೀಲಕ್ಷ್ಮಿ ರೆಡ್ಡಿ, ತಂದೆ ಜೈಪಾಲ ರೆಡ್ಡಿ ಹಾಗೂ ಮಾವ ನಾರಾಯಣ ರೆಡ್ಡಿ ಅವರು ಮೊದಲನೇ ಡೋಸ್ ಪಡೆದುಕೊಂಡರು.
ಎರಡನೇ ಬಾರಿಗೆ ಡೋಸ್ ಪಡೆದುಕೊಂಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.