ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಕುರಿತು ಮಾತನಾಡಿರುವ ಅವರು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡಬೇಕೆನ್ನುವುದು ಸಂವಿಧಾನಬದ್ಧ ಬದ್ಧತೆ. ಆದರೆ, ಸಿಎಂ ಅವರದ್ದು ಮುಚ್ಚುಮರೆಯ ಸರ್ಕಾರ. ಈ ಬಜೆಟ್‍ನಲ್ಲಿ ಸರ್ಕಾರ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದು ಹೇಳಿದರು.
ಇನ್ನು ಆಯವ್ಯಯವನ್ನು ಇಲಾಖಾವಾರು ನೀಡದೆ 6 ವಲಯಗಳಾಗಿ ವಿಂಗಡಿಸಿ, ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ? ಇಲಾಖೆಗಳ ಕಾರ್ಯಕ್ರಮಗಳೇನು? ಕಳೆದ ವರ್ಷದ ಸಾಧನೆಗಳೇನು? ಹೊಸ ಯೋಜನೆಗಳೇನು? ಎಂಬ ವಿವರಗಳೇ ಇಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪನವರು ರಾಜ್ಯದ ಬಜೆಟ್‍ಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ರಾಜ್ಯದಲ್ಲಿರುವ 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಈ ಆರೂ ವಲಯಗಳಿಗೆ ಕಳೆದ ಬಜೆಟ್‍ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಿಂತ ಕಡಿಮೆ ಹಣ ನಿಗದಿಪಡಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ರೂ.1231 ಕೋಟಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ರೂ.9943 ಕೋಟಿ, ಆರ್ಥಿಕ ಅಭಿವೃದ್ಧಿ ಪ್ರಚೋದನೆ ವಲಯಕ್ಕೆ ರೂ.3203 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ರೂ.997 ಕೋಟಿ, ಸಂಸ್ಕೃತಿ -ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲ ವಲಯಕ್ಕೆ 1907 ಕೋಟಿ ಕಡಿಮೆ ಅನುದಾನವನ್ನು ನಿಗದಿಪಡಿಸಲಾಗಿದೆ.
ಆಡಳಿತ ಸುಧಾರಣಾ ವಲಯಕ್ಕೆ ಮಾತ್ರ ರೂ.42,325 ಕೋಟಿಯಷ್ಟು ಅನುದಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹೆಚ್ಚುವರಿ ಅನುದಾನಕ್ಕೆ ಯಾವ ಹೊಸ ಯೋಜನೆಗಳನ್ನೂ ಪ್ರಕಟಮಾಡಿಲ್ಲ ಎಂದರು.
ಬಜೆಟ್‍ನಲ್ಲೂ ಕೃಷಿ ಕ್ಷೇತ್ರ ನಿರ್ಲಕ್ಷ್ಯ
ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ತನ್ನ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ.
ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಸಹಕಾರ, ಮೀನುಗಾರಿಕೆ, ರೇಷ್ಮೆ ಮೊದಲಾದ ಕೃಷಿ ಸಂಬಂಧಿತ ಇಲಾಖೆಗಳಿಗೆ ಕಳೆದ ಬಜೆಟ್‍ನಲ್ಲಿ ರೂ. 32,259 ಕೋಟಿ ಅನುದಾನ ನೀಡಿದ್ದರೆ, ಪ್ರಸಕ್ತ ಬಜೆಟ್‍ನಲ್ಲಿ ರೂ 31,028 ಕೋಟಿ ಅನುದಾನ ಒದಗಿಸಲಾಗಿದೆ. ಅಂದರೆ, ರೂ 1,231 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿಎಸ್‌ವೈ ಅವರು ತನ್ನ ಎರಡನೇ ಬಜೆಟ್‍ನಲ್ಲಿ ಕೂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ಲಕ್ಷದವರೆಗಿನ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತ್ತು. ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಎರಡೂ ಬಜೆಟ್‍ಗಳಲ್ಲೂ ರೈತರ ಸಾಲ ಮನ್ನಾದ ಪ್ರಸ್ತಾಪವೇ ಇಲ್ಲ ಎಂದು ಹೇಳಿದರು.