- ಲೈಂಗಿಕ ಹಗರಣದಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಲವರು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಿಎಂಗೆ ಒತ್ತಡ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಳಂಕಿತ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಯಾವುದೇ ಕಾರಣಕ್ಕೂ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಆಮ್ ಆದ್ಮಿ ಪಕ್ಷ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೈಂಗಿಕ ಹಗರಣದಲ್ಲಿ ರಮೇಶ್ ಜಾರಕಿಹೊಳಿ ಅವರದ್ದು ಯಾವುದೇ ತಪ್ಪಿಲ್ಲ ಎಂದು ಒಂದಷ್ಟು ಜನ ಸಚಿವರು, ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಡ ತಂದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳ ನಡೆ ಕೂಡ ಆಘಾತಕಾರಿ. ಯಾವುದೇ ಕಾರಣಕ್ಕೂ ಕಳಂಕಿತ ವ್ಯಕ್ತಿ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬಾರದು ಎಂದು ಒತ್ತಾಯಿಸಿದರು.
ಈ ಹಿಂದೆ ನಡೆದ ಅನೇಕ ಪ್ರಕರಣಗಳಲ್ಲಿ ಇದುವರೆಗೂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಇಂತಹ ಕೆಟ್ಟಲೈಂಗಿಕ ಹಗರಣ ನಡೆದು ಒಂದು ವಾರವೂ ಕಳೆದಿಲ್ಲ, ಆಗಲೇ ಆರೋಪಿ ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಲೀನ್‌ಚಿಟ್ ನೀಡಿ, ಮಂತ್ರಿ ಮಾಡಲು ಹೊರಟಿರುವುದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದ ಎಚ್.ವೈ.ಮೇಟಿ ಪ್ರಕರಣದಲ್ಲೂ ಇದೇ ರೀತಿ ನಡೆದಿತ್ತು ಎಂದರು.
6 ಜನ ಸಚಿವರು ತಮ್ಮ ವಿರುದ್ದ ಯಾವುದೇ ಆರೋಪಗಳು ಹೊರ ಬರಬಾರದು ಎನ್ನುವ ಕಾರಣಕ್ಕೆ ಈಗಾಗಲೇ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಶೋಷಿತ ಹೆಣ್ಣು ಮಕ್ಕಳು ಮುಂದೆ ಬಂದು ದೂರ ನೀಡಲು, ನ್ಯಾಯದ ಪರವಾಗಿ ಹೋರಾಡಲು ತೊಡಕಾಗಿದೆ. ಇವರೆಲ್ಲರ ನಡೆ ನೋಡಿದರೆ ಇವರೂ ಸಹ ಇಂತಹ ಕೆಟ್ಟ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ರಾಜ್ಯದ ರಾಜಸ್ವ ಸಂಗ್ರಹ ಕಾಮುಕರ ಕೈಗೆ ಸಿಕ್ಕಿಹಾಕಿಕೊಂಡಿದೆ
ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಗೆ ಬೆದರಿಕೆ ಒಡ್ಡಿ ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ವಿಚಾರದಲ್ಲಿ ಗೃಹ ಇಲಾಖೆ ವೈಫಲ್ಯಗೊಂಡಿದೆ ಕಾಮುಕರ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತವರ ಪರವಾಗಿ ಇರುವ ಲಜ್ಜೆಗೆಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮಗೆ ರಾಜ್ಯದ ಹೆಣ್ಣು ಮಕ್ಕಳ ಮೇಲೆ ಕಿಂಚಿತ್ತಾದರೂ ಗೌರವವಿದ್ದರೆ ಸಚಿವ ಸಂಪುಟಕ್ಕೆ ರಮೇಶ್ ಜಾರಕಿಹೊಳಿ ಅವರನ್ನು ಸೇರಿಸಿಕೊಳ್ಳಲೇ ಬಾರದು ಎಂದರು.
ಕೇಂದ್ರದಲ್ಲೂ ನಿಮ್ಮದೆ ಸರ್ಕಾರವಿದೆ ನಿಮ್ಮ ಸ್ನೇಹಿತರು ತಪ್ಪು ಮಾಡಿಲ್ಲ ಎಂದಾದರೆ ಈ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಿ. ಬಜೆಟ್‌ನಲ್ಲಿ ಸೇಫ್ ಸಿಟಿ ಎಂದು ಯೋಜನೆ ಘೋಷಣೆ ಮಾಡುವ ಮೊದಲು ಬಿಜೆಪಿ ಶಾಸಕರಿಂದ ರಾಜ್ಯದ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಹೇಳಿದರು.
ಯಡಿಯೂರಪ್ಪ ಅವರೇ ನೀವು ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದವರನ್ನು ಹೊತ್ತು ಮೆರೆಸುತ್ತಿದ್ದೀರಿ. ಈಗಲೂ ನಿಮ್ಮಿಂದ ಕೆಟ್ಟ ಸಂಪ್ರದಾಯ ಮುಂದುವರಿಯುತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನು ಏನಾದರೂ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡರೆ ಹೆಣ್ಣು ಮಕ್ಕಳನ್ನು ಸಂಘಟಿಸಿ ಇಡೀ ರಾಜ್ಯದಾದ್ಯಂತ ತೀವ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ ಹಾಗೂ ನಿಮ್ಮ ಮನೆಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.