ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪಾರದರ್ಶಕ ವೇದಿಕೆಯಾಗಿ ಸಿಬ್ಬಂದಿ ಕುಂದುಕೊರತೆ ಪರಿಹಾರ (Employee grievance redressal) ತಂತ್ರಾಂಶ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನಂದೀಶ್ ರೆಡ್ಡಿ ಹೇಳಿದರು.
ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿರುವ ಸಿಬ್ಬಂದಿ ಕುಂದುಕೊರತೆ ಪರಿಹಾರ ತಂತ್ರಾಂಶವನ್ನು ಸೋಮವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ತಂತ್ರಾಂಶದ ಕೆಲವು ಪ್ರಮುಖ ಲಕ್ಷಣಗಳೆಂದರೆ ತಂತ್ರಾಂಶವು ಕಾಗದರಹಿತ ಮತ್ತು ಬಳಕೆದಾರರ ಸ್ನೇಹಿಯಾಗಿದೆ. ನೌಕರರು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಬಹುದು.
ಸಿಬ್ಬಂದಿಗಳು ಕೊರತೆಯ ಪ್ರಕಾರಗಳನ್ನು ಆಯ್ಕೆಮಾಡಿ ಸಮಸ್ಯೆಯ ವಿವರದೊಂದಿಗೆ ಮೇಲಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಪ್ರತಿ ನೋಂದಾಯಿತ ಕುಂದುಕೊರತೆಗಳ ವಿಶಿಷ್ಟ ಸ್ವೀಕೃತಿ ಸಂಖ್ಯೆಯನ್ನು ರಚಿಸಲಾಗುತ್ತದೆ ಮತ್ತು ನೌಕರರ ಲಾಗಿನ್ ನಲ್ಲಿ ಲಭ್ಯವಿರುವ ವರದಿಗಳಲ್ಲಿ ಸ್ಥಿತಿಯನ್ನು ವೀಕ್ಷಿಸಬಹುದು.
ನಿಗದಿತ ಸಮಯದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಯದಿದ್ದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ವಿಳಂಬವಾದಲ್ಲಿ ಕುಂದುಕೊರತೆಗಳನ್ನು ಸಂಬಂಧಪಟ್ಟ ಉನ್ನತ ಪ್ರಾಧಿಕಾರಕ್ಕೆ ಸ್ವಯಂಚಾಲಿತವಾಗಿ ಮುಂದಿಡಲಾಗುವುದು.