ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಹಿಂಪಡೆಯುವ ಬಗ್ಗೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ನೀಡಿದ್ದರಿಂದ ನನಗೆ ನೋವಾಗಿ ದೂರು ವಾಪಸ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ದೂರು ವಾಪಸ್ ಪಡೆಯುವ ಬಗ್ಗೆ ದಿನೇಶ್ ಕಲ್ಲಹಳ್ಳಿ ಪರ ವಕೀಲರು ಇಲ್ಲ ನಾವು ಕೊಟ್ಟಿರುವ ದೂರಿನಲ್ಲಿ ಕೆಲ ತಾಂತ್ರಿಕ ಸಮಸ್ಯೆ ಇರುವುದರಿಂದ ನಾವು ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಈ ನಡುವೆ ಕಲ್ಲಹಳ್ಳಿ ಮಾಜಿ ಸಿಎಂ ಹೇಳಿಕೆಯಿಂದ ನೊಂದು ದೂರು ವಾಪಸ್ ಪಡೆಯುತ್ತಿರುವುದಾಗಿ ಹೇಳಿಕೆ ನೀಡಿರುವುದು ಇನ್ನು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಇನ್ನು ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತಮ್ಮ ವಕೀಲರು ಹೋಗಿದ್ದಾರೆ ಎಂದು ಹೇಳಿರುವ ಅವರು, ಕುಮಾರಸ್ವಾಮಿ ಅವರ ಹೇಳಿಕೆಯಿಂದ ನೋವಾಗಿದೆ. ಅವರ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಎಂದೆ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನು ಟಾರ್ಗೆಟ್ ಮಾಡುವುದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ದಿನೇಶ್ ಪತ್ರ: ಮಾಜಿ ನೀರಾವರಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು ಸರಿಯಷ್ಟೇ. ಮೇಲೆ ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಬಟ್ಟೆಯ ಮೇಲೆ ಮುಳ್ಳು ಬಿದ್ದರು ಹರಿಯುವುದು ಬಟ್ಟೆ ಎಂಬ ನಾಣ್ಣುಡಿಯನ್ನು ಈ ಹಿಂದೆ ಮಹಿಳೆಯರ ವಿಷಯದಲ್ಲಿ ಹಿರಿಯರು ಹೇಳುತ್ತಿದ್ದರು. ದುರಾದೃಷ್ಟವಶಾತ್ ಈಗಿನ ಸುಸಂಸ್ಕೃತ ನಾಗರಿಕ ಸಮಾಜದಲ್ಲಿ ಮಹಿಳೆಯರ ವಿಚಾರದಲ್ಲಿ ನಾಣ್ಣುಡಿಯಂತೆಯೇ ನಡೆಯುತ್ತಿದೆ.
ಸಚಿವರದ್ದೆನ್ನಲಾದ ಲೈಂಗಿಕ ದೌರ್ಜನ್ಯದ ಸಿಡಿಯನ್ನು ಪೊಲೀಸರಿಗೆ ದೂರಿನ ಜತೆಗೆ ಒಪ್ಪಿಸಿದ್ದೆ. ಈಗ ಇಡೀ ಸಮಾಜದಲ್ಲಿ ಮಹಿಳೆಯರ ಚಾರಿತ್ರ್ಯಹರಣ ನಡೆಯುತ್ತಿದೆ ಎಂದು ಬರೆದಿದ್ದಾರೆ.
ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆ ಕೂಡ ದಾಖಲಿಸಿದ್ದರು. ಆದರೆ ಈಗ ಕಲ್ಲಹಳ್ಳಿ ಅವರು ಯೂಟರ್ನ್ ತೆಗೆದುಕೊಂಡಿರುವುದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಇದು ಮತ್ತೆ ಯಾವರೀತಿಯ ತಿರುವು ಪಡೆಯುತ್ತದೋ ಕಾದು ನೋಡಬೇಕಿದೆ.