ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿ ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಮಾ.13ರಂದು ಶಿವಮೊಗ್ಗ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ನಿನ್ನೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ನಾಯಕರು ಶಾಂತಿ ಭಂಗದ ಹೇಳಿಕೆ ನೀಡಿದ್ದರೂ ಸರ್ಕಾರ ಯಾರ ಮೇಲೂ ಕೇಸು ದಾಖಲಿಸಲಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಕೊರೊನಾ ಸಮಯದಲ್ಲಿ ಸರಕಾರದ ಪದಾರ್ಥವನ್ನು ತಮ್ಮ ಪದಾರ್ಥ ಎಂಬಂತೆ ಹಂಚಿದ್ದರು. ಅದನ್ನು ಬಯಲು ಮಾಡಿದ್ದರು ಕ್ರಮ ಕೈಗೊಳ್ಳಲಿಲ್ಲ ಎಂದರು.
ಬಿಜೆಪಿ ಸರ್ಕಾರದ ಈ ನಡೆಯ ವಿರುದ್ಧ ಪ್ರತಿಭಟನೆಗೆ ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ. ಪಕ್ಷದ ಶಾಸಕ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಿಜೆಪಿಗೆ ಸೆಳೆಯಲು ಒತ್ತಡ ಹೇರಿದ್ದರು. ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ಇದ್ದಾನೆ ಎಂದು ಪೊಲೀಸರ ಕೈಯಲ್ಲಿ ಎಫ್‌ಐಆರ್ ಹಾಕಿಸಿ ತೊಂದರೆ ನೀಡುತ್ತಿದ್ದಾರೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರು ಅವಕಾಶ ನೀಡಲಿಲ್ಲ. ಆಗ ನೋವಿನಿಂದ ತಮ್ಮ ಅಂಗಿ ಬಿಚ್ಚಿ ಮೈ ಮೇಲೆ ಆಗಿರುವ ಗಾಯ ತೋರಿಸಲು ಮುಂದಾದಾಗ ಅಸಭ್ಯ ವರ್ತನೆ ಎಂದು ಹೇಳಿ ಅವರನ್ನು ವಿಧಾನಸಭೆಯ ಕಲಾಪದಿಂದ ಒಂದು ವಾರ ಕಾಲ ಹೊರಗಿಡಲಾಗಿದೆ. ಆ ಮೂಲಕ ಅವರಿಗೆ ತೊಂದರೆ ನೀಡಲಾಗಿದೆ ಎಂದು ದೂರಿದರು.