ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಭಾಗಗಳು ಕೆರೆಯಂತಾಗಿವೆ. ಒಂದೆಡೆ ಜನ ಸಂಕಷ್ಟಗಳಿಂದ ಹೈರಾಣಾಗಿದ್ದಾರೆ, ಮತ್ತೊಂದೆಡೆ ಆಡಳಿತ ಯಂತ್ರ ಕುಸಿದಿದ್ದು, ಸಮಪರ್ಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಜನರು ಟೀಕಿಸುತ್ತಿದ್ದಾರೆ.
ಇತ್ತ ಕನ್ನಡನಾಡಿಗೆ ಕಷ್ಟ ಬಂದಾಗಲೆಲ್ಲಾ ಬಿಜೆಪಿಯವರು ಸೌಜನ್ಯ ಮರೆತು, ಮನುಷ್ಯತ್ವ ಇಲ್ಲದೇ ನಡೆದುಕೊಳ್ಳುತ್ತಾರೆ ಎಂಬುದನ್ನು ತೇಜಸ್ವಿ ಸೂರ್ಯ ಮತ್ತೆ ತೋರಿಸಿಕೊಟ್ಟಿದ್ದಾರೆ ಎಂದು ಆಪ್ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ತಮ್ಮ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಣದಲ್ಲಿ ಕಾಣಿಸುತ್ತಿರುವ ಅವರ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಬೆಂಗಳೂರಿನ ಬಹುಭಾಗ ಮಳೆಹಾನಿಯಿಂದ ತತ್ತರಿಸಿ ಹೋಗಿರುವಾಗ ಯಾವುದೋ ಹೋಟೆಲ್ ನ ಊಟ ಸವಿದು ಅದರ ಪ್ರಚಾರ ಮಾಡಲು ಹೊರಟಿರುವುದು ಅತಿರೇಕ ಮತ್ತು ಅಸಹ್ಯದ ವರ್ತನೆ ನಾಚಿಕೆಗೇಡಿನದ್ದು. ಬಿಜೆಪಿಯ ಬಾಲಿಶ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ ಎಂದಿದ್ದಾರೆ.
ಇಡೀ ಬಿಜೆಪಿ ಶಾಸಕರು ಸಚಿವರೊಂದಿಗೆ ಸಂಸದರೂ 40% ಕಮಿಷನ್ ಫಲಾನುಭವಿಗಳಾಗಿ ಇಂದು ನಗರ ಕೊಚ್ಚಿಹೋಗಲು ಕಾರಣರಾಗಿದ್ದಾರೆ, ಇಂಥವರನ್ನು ಪಡೆದದ್ದು ಬೆಂಗಳೂರಿನ ದೌರ್ಭಾಗ್ಯ ಎಂದು ಹೇಳಿದ್ದಾರೆ.