ಮೈಸೂರು: ತೆಲಂಗಾಣ ರಾಜ್ಯದಲ್ಲಿ ರಾಜ್ಯ ಸರ್ಕಾರವೇ ಪ್ರತಿಯೊಬ್ಬರಿಗೂ 5 ಲಕ್ಷ ರೂ. ಜೀವ ವಿಮೆ ಪಾಲಿಸಿ ನೀಡಿದೆ. ಇದರಿಂದ ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಸಿಗುತ್ತದೆ ಅದೇ ರೀತಿ ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಎಲ್ಲ ಕೃಷಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಪಂಜಾಬ್, ಹರಿಯಾಣ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ತೆರೆಯಬೇಕು ರೈತರಿಂದ ಖರೀದಿಸುವ ಖರೀದಿ ಮಿತಿಯನ್ನು ರದ್ದುಗೊಳಿಸಬೇಕು. ಮೇಲಿನ ರಾಜ್ಯಗಳಲ್ಲಿ ಇರುವಂತೆ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
ರೈತರು ಬೆಳೆದ ಎಲ್ಲ ಪೌಷ್ಟಿಕ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂಥ ವ್ಯವಸ್ಥೆ ಜಾರಿಗೆ ಬರಬೇಕು. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿಸಿ, ಸರ್ಕಾರದ ಅಂಗಸಂಸ್ಥೆಗಳಾದ ಆಸ್ಪತ್ರೆ ವಿದ್ಯಾರ್ಥಿನಿಲಯ, ಜೈಲುಗಳಿಗೆ, ಪೂರೈಸುವ ವ್ಯವಸ್ಥೆ ಮಾಡಬೇಕು.
ಎಲ್ಲ ಕೃಷಿ ಉತ್ಪಾದನಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು, ಬೆಳೆವಿಮೆ ಪದ್ದತಿ ಕೆಲವು ನೀತಿಗಳು ಬದಲಾಗಬೇಕು. ಅತಿವೃಷ್ಟಿ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ಪರಿಹಾರ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು.
ಎಲ್ಲ ರೈತರಿಗೂ ಬರಿ ಪಹಣಿ ಪತ್ರ ಆಧರಿಸಿ ಕನಿಷ್ಠ 3 ಲಕ್ಷ ರೂ. ಆಧಾರರಹಿತ ಬಡ್ಡಿ ಇಲ್ಲದ ಸಾಲ ಕೊಡಿಸುವ ಯೋಜನೆ ಎಲ್ಲ ಬ್ಯಾಂಕುಗಳಲ್ಲಿ ಜಾರಿಯಾಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಮೇಳಗಳನ್ನು ಅಂತಾರಾಷ್ಟ್ರೀಯ ವಿಶ್ವ ರೈತರ ದಿನದಂದು, ಡಿಸೆಂಬರ್ 23ರಂದು, ದಿವಂಗತ ಎಂಡಿಎನ್ ಹೆಸರಿನಲ್ಲಿ ರೈತರ ಹಬ್ಬದ ರೀತಿ ಆಚರಿಸಲು ಕ್ರಮ ಕೈಗೊಳ್ಳಬೇಕು.
ಕಬ್ಬಿನ ಎಫ್‌ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳ ಹಾಗೂ ಕಟಾವ್, ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ಆರ್‌ಇಜಿ ಯೋಜನೆಯ ಕಬ್ಬು ಕಟಾವು ಹಾಗೂ ಬಿತ್ತನೆಗೆ ಬಳಸಿಕೊಳ್ಳಲು ಯೋಜನೆಗೆ ಸೇರಿಸಬೇಕು ಬಾಳೆ ಬೆಳೆಗೆ ಪ್ರೋತ್ಸಾಹ ಧನ ನೀಡುವ ರೀತಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು. ಇಳುವರಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು.
ಕಬ್ಬಿನ ಎಥನಾಲ್ ಉತ್ಪಾದನಾ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು. ಕಬ್ಬಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಬೆಂಕಿ ಅನಾಹುತವಾದಾಗ ಸುಟ್ಟು ಹೋದ ಕಬ್ಬಿಗೆ ಯಾವುದೇ ಮಾನದಂಡವಿಲ್ಲದೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವು ಮಾಡುವುದನ್ನು ತಪ್ಪಿಸಬೇಕು. ಎಫ್‌ಆರ್‌ಪಿ ಪೂರ್ಣ ಹಣ ರೈತರಿಗೆ ಪಾವತಿ ಆಗಬೇಕು.
ಕೃಷಿ ಉತ್ಪನ್ನಗಳಿಗೆ ಎಪಿಎಂಸಿ ಯಲ್ಲಿ ಅಡಮಾನ ಸಾಲ ಯೋಜನೆ ಸದೃಢಗೊಳಿಸಬೇಕು. ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನ ಮೀಸಲಿಡಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ಯಾಕ್ಟರ್ ಬಿಡಿಭಾಗಗಳ ಜಿ ಎಸ್ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.
ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪರಿಹಾರ ಮನದಂಡ ಹೆಚ್ಚಳ ಮಾಡಬೇಕು. ಕೃಷಿ ಜಮೀನು ಅಭಿವೃದ್ಧಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಅವಶ್ಯಕತೆ ಸಂದರ್ಭದಲ್ಲಿ ರೈತರನ್ನ ಪಾಲುದಾರರನ್ನಾಗಿ ಮಾಡಬೇಕು.
ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ತಿಂಗಳಿಗೊಮ್ಮೆ ರೈತರ ಸಭೆ ನಡೆಸಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕುತ್ತದೆ ಈ ಬಗ್ಗೆ ಸರ್ಕಾರ ಕಠಿಣ ಸೂಚನೆ ನೀಡಬೇಖು ಎಂಬ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಕ್ರಮಕೈಗೊಳ್ಳಬೇಕು. ರೈತರ ಅಭಿವೃದ್ಧಿ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.