ಹುಬ್ಬಳ್ಳಿ : ಈ ಬಾರಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲು ಈಗಾಗಲೇ ಬಜೆಟ್ ಸಿದ್ಧತೆಯಲ್ಲಿ ತೊಡಗಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಉಣಕಲ್ಲದ ಸಿದ್ದಪ್ಪಜನವರ ಜಾತ್ರೆ ಅಂಗವಾಗಿ ಮೂಲ ಗದ್ದುಗೆ ಮಠಕ್ಕೆ ಭಾನುವಾರ ಭೇಟಿ ನೀಡಿದ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ಸಿದ್ಧಪಡಿಸುವ ಕುರಿತು ವಿವಿಧ ಇಲಾಖೆಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ರಾಜ್ಯಕ್ಕೆ ಅತ್ಯುತ್ತಮ ಬಜೆಟ್ ನೀಡಲಾಗುವುದು, ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆ ನೀಡುತ್ತೇವೆ ಎಂದು ತಿಳಿಸಿದರು.
ಇನ್ನು ದೇಗುಲಕ್ಕೆ ನಾನು ಚಿಕ್ಕಂದಿನಿಂದಲೂ ಬರುತ್ತಿದ್ದೇನೆ. ಇದೇ ಮೊದಲ ಬಾರಿ ಏನು ಅಲ್ಲ. ಆದರೆ, ಇಂದು ವಿಶೇಷವಾಗಿ ಜಾತ್ರೆ ಇರುವ ಹಿನ್ನೆಲೆಯಲ್ಲಿ ಅಜ್ಜನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ ಹಾಗೂ ಸ್ಥಳೀಯ ಮುಖಂಡರು ಇದ್ದರು.