ಪಿರಿಯಾಪಟ್ಟಣ: ಆಳುವ ಸರ್ಕಾರಗಳು ಮೀಸಲಾತಿ ವಿಚಾರದಲ್ಲಿ ಬಲಾಢ್ಯ ಸಮುದಾಯಗಳ ಪರ ನಿಂತಿರುವುದು ಕಾಯಕ ಸಮಾಜಗಳಿಗೆ ಮಾಡಿದ ದ್ರೋಹ ಎಂದು ತಾಲೂಕು ವಿಶ್ವಕರ್ಮ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಿರಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೀಸಲಾತಿಯ ಮೂಲ ಉದ್ದೇಶ ದ್ವನಿ ಇಲ್ಲದವರಿಗೆ ಧ್ವನಿ ನೀಡುವುದು. ಆದರೆ ಈಗ ಆಳುವ ಸರ್ಕಾರಗಳು ಮೀಸಲಾತಿ ಉದ್ದೇಶವನ್ನು ತಿರುಚುವ ಕೆಲಸ ಮಾಡುತ್ತಿವೆ. ನಾವು ಯಾವುದೇ ಜಾತಿಗೆ ಮೀಸಲಾತಿ ಕಲ್ಪಿಸಿದರೂ ಅದಕ್ಕೆ ನಾವು ವಿರೋಧಿಯಲ್ಲ, ಆದರೆ ಉಳ್ಳವರಿಗೆ ಮತ್ತೆ ಮೀಸಲಾತಿ ಕಲ್ಪಿಸುವುದು ಯಾವ ನ್ಯಾಯ. ಸರ್ಕಾರಗಳು ಈ ಬಗ್ಗೆ ಮಾತನಾಡಬೇಕು ಅದನ್ನು ಬಿಟ್ಟು ತಮ್ಮ ಸ್ವಾರ್ಥಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿಯುವುದು ತಪ್ಪು ಎಂದರು.
ಅಮರ ಶಿಲ್ಪಿ ಜಕಣಾಚಾರಿ ಅವರು ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಬೇಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ. ಮಾಡುವ ಕೆಸದ ಬಗ್ಗೆ ತಿಳಿವಳಿಕೆ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು.
ಶಾಸಕ ಕೆ ಮಹದೇವ್ ಮಾತನಾಡಿ, ಸಾಧಕರನ್ನು ಸ್ಮರಣೆ ಮಾಡಿದರಷ್ಟೇ ಸಾಲದು ಅವರ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಘಟನೆಗಳನ್ನ ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಮುಖ್ಯ. ಅಮರ ಶಿಲ್ಪಿ ಜಕಣಾಚಾರಿ ಅವರನ್ನು ನಾವು ಇಂದು ನೆನೆಯುವ ಹಾಗೆ ಉತ್ತಮ ಜ್ಞಾನ ಮತ್ತು ಕಲಾತ್ಮಕ ಪ್ರವೃತ್ತಿ ರೂಢಿಸಿಕೊಂಡಿದ್ದೆ ಆದರೆ ಸಮಾಜ ನಮ್ಮನ್ನು ಸ್ಮರಿಸುವಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಮಾರ್, ತಾಲೂಕು ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಆಚಾರ್ಯ, ಉಪಾಧ್ಯಕ್ಷ ತಿರು ನೀಲಕಂಠ, ಮುಖಂಡರಾದ ಅಣ್ಣಯ್ಯ ಶೆಟ್ಟಿ, ಲೋಕಪಾಲಯ್ಯ, ಅಬ್ಬೂರು ಚಂದ್ರು, ರಾಮು ವಿವಿಧ ಇಲಾಖೆಗಳ ಅಧಿಕಾರಿಗಳಾದ ಸಿದ್ದೇಗೌಡ, ಡಾ.ಸೋಮಯ್ಯ, ವಿನಯ್ ಕುಮಾರ್, ಪ್ರಸಾದ್, ಮಲ್ಲಿಕಾರ್ಜುನ್ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು.