ಬನ್ನೂರು: ಸೂರ್ಯ ತನ್ನ ಪಥವನ್ನು ಬದಲಿಸುವ ಮಕರ ಸಂಕ್ರಮಣದ ಈ ಸುದಿನ ಸಂಭ್ರಮದ ಬದುಕಿನ ಹೊಸತನದೊಂದಿಗೆ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಡೆ ಅದ್ದೂರಿಯಾಗಿ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಮೂಲಕ ಸುಗ್ಗಿಹಬ್ಬ ಆಚರಿಸಲಾಯಿತು.
ಈ ಸಂಭ್ರಮವನ್ನು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲೂ ಪ್ರತಿವರ್ಷದಂತೆ ಈ ವರ್ಷವೂ ರಾಸುಗಳ ಕಿಚ್ಚು ಹಾಯಿಸಲಾಯಿತು. ಗ್ರಾಮದ ಪ್ರವೇಶದ್ವಾರದ ಶ್ರೀ ಶನೇಶ್ವರ ದೇಗುಲದ ಬಳಿ ಗ್ರಾಮಸ್ಥರು ಎತ್ತುಗಳು, ಹಸುಗಳು, ಕುರಿ ಮೇಕೆ ಸೇರಿದಂತೆ ಜಾನುವಾರಗಳ ಕಿಚ್ಚು ಹಾಯಿಸುವ ಮೂಲಕ ಹಬ್ಬದ ಸಡಗರದಲ್ಲಿ ಮಿಂದೆದ್ದರು.
ಇನ್ನು ಊರಿನ ಹೃದಯ ಭಾಗದಲ್ಲಿರುವ ಶ್ರೀ ನಂದಿ ಬಸವೇಶ್ವರ ದೇಗುಲದ ವರೆಗೂ ಯುವ ಸಮೂಹ ಅಲಂಕರಿಸಿಕೊಂಡು ಕರೆತಂದಿದ್ದ ಎತ್ತುಗಳು, ಹಸುಗಳು, ಕುರಿಗಳು ಸೇರಿ ಎಲ್ಲ ರಾಸುಗಳನ್ನು ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಮೊದಲು ನಂದಿ ಬಸವೇಶ್ವರ ಸ್ವಾಮಿಯ ಬಸವ ಮೊದಲು ಕಿಚ್ಚುಹಾಯಬೇಕು. ನಂತರ ಗ್ರಾಮಸ್ಥರು ತಮ್ಮ ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಿಕೊಂಡು ಓಡುವ ದೃಶ್ಯ ನೋಡುವುದೆ ಕಣ್ಣಿಗೆ ಹಬ್ಬ.
ಬನ್ನೂರು ಸುತ್ತಮುತ್ತಲಿನ ಗ್ರಾಮಗಳಾದ ಅತ್ತಹಳ್ಳಿ, ಚಾಮನಹಳ್ಳಿ, ಬಸವನಹಳ್ಳಿ, ಹನುಮನಾಳು, ಮಾದಿಗಹಳ್ಳಿ, ಮಾಕನಹಳ್ಳಿ ಸೇರಿದಂತೆ ಎಲ್ಲ ಗ್ರಾಮಹಳಲ್ಲೂ ರಾಸುಗಳಲ್ಲೂ ಕಿಚ್ಚು ಹಾಯಿಸುತ್ತಿದ್ದ ದೃಶ್ಯ ಮನಸ್ಸಿಗೆ ಮುದ ನೀಡುವಂತಿತ್ತು.
ಇನ್ನು ನಗರ ಪ್ರದೇಶಗಳ ಜೊತೆಗೆ ಹಳ್ಳಿಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಭಾನುವಾರ ಮುಂಜಾನೆಯೂ ಹಬ್ಬದ ಖರೀದಿ ಮುಂದುವರಿದಿತ್ತು. ಜನರು ಕಬ್ಬು, ಎಳ್ಳು–ಬೆಲ್ಲ, ಅವರೆ–ಗೆಣಸು ಮೊದಲಾದ ಸಾಮಗ್ರಿಗಳನ್ನು ಕೊಂಡು ತಂದರು.
ಮನೆಯಲ್ಲಿನ ಹೆಣ್ಣುಮಕ್ಕಳು ಹೊಸ ಬಟ್ಟೆ ತೊಟ್ಟು, ಅಕ್ಕಪಕ್ಕದ ಮನೆಮಂದಿಗೆಲ್ಲ ಎಳ್ಳು–ಬೆಲ್ಲ ಹಂಚುತ್ತ ಶುಭಾಶಯ ಕೋರಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ದೇಗುಲಗಳಲ್ಲಿ ಜನರ ಸಾಲು ನೆರೆದಿತ್ತು.
ಇನ್ನು ಉತ್ತರ ಕರ್ನಾಟಕದಲ್ಲೂ ಈ ಸುಗ್ಗಿಯ ಹಿಗ್ಗೆ ತುಸು ಜೋರಾಗೇ ಇತ್ತು. ಉತ್ತರದ ಹಳ್ಳಿಯ ಮಂದಿ ಹಬ್ಬದ ಸಂಭ್ರಮದ ಸವಿಯನ್ನು ಸವಿದರು. ಸುಗ್ಗಿಯ ಹಬ್ಬ ಕಳೆಗಟ್ಟಿತ್ತು. ಬೆಳೆದ ಪದಾರ್ಥಗಳನ್ನು ರಾಶಿ ಹಾಕಿ ರಾಶಿ ಪೂಜೆ ನಡೆಸಿದರು. ರಾಸುಗಳ ಮೈ ತೊಳೆದು, ವಿವಿಧ ಸಾಮಗ್ರಿಗಳಿಂದ ಅಲಂಕರಿಸಿ, ಸಂಜೆ ಕಿಚ್ಚು ಹಾಯಿಸಿದರು. ಈ ಮೂಲಕ ರಾಜ್ಯಾದ್ಯಂತ ಸುದ್ದಿಹಬ್ಬದ ಸಂಭ್ರಮ ಮನಸೂರೆಗೊಂಡಿತು.