ಪಿರಿಯಾಪಟ್ಟಣ : ಶಿಥಿಲಗೊಂಡಿದ್ದ ಬಸವೇಶ್ವರ ದೇವಾಲಯ ಮತ್ತು ಋಷಿಮುನಿ ದಂಪತಿಗಳ ಜೀವಂತ ಗದ್ದುಗೆಯನ್ನು ಗುಡಿಭದ್ರನ ಹೊಸಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಪುನರ್ ನವೀಕರಣ ಮಾಡಿ ಉದ್ಘಾಟನೆಗೆ ಸಿದ್ದಗೊಳಿಸಿದ್ದಾರೆ.
ತಾಲೂಕಿನ ಹಾಸನ ಜಿಲ್ಲೆಯ ಗಡಿಭಾಗದ ಗ್ರಾಮವಾದ ಗುಡಿಭದ್ರನ ಹೊಸಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಮತ್ತು ಜಡೇಸ್ವಾಮಿ ಋಷಿ ಮುನಿ ದಂಪತಿಗಳ ಗದ್ದುಗೆ ಇದ್ದು ಎರಡು ಸಂಪೂರ್ಣ ಶಿಥಿಲಹಂತ ತಲುಪಿತ್ತು ಈ ಬಗ್ಗೆ ಗ್ರಾಮಸ್ಥರೆಲ್ಲ ಸೇರಿ ದೇವಾಲಯವನ್ನು ಅಭಿವೃದ್ದಿ ಪಡಿಸಲು ಮುಂದಾಗಿದ್ದು ದಾನಿಗಳ ಸಹಕಾರದ ಫಲವಾಗಿ ಸುಂದರ ದೇವಾಲಯ ನಿರ್ಮಾಣವಾಗಿದೆ.
ಋಷಿ ಮುನಿ ದಂಪತಿಗಳು ಇಲ್ಲಿ ಕಲ್ಲುಚಪ್ಪಡಿಗಳ ನಡುವೆ ಜೀವಂತ ಸಮಾಧಿಯಾಗಿದ್ದು ಇದು ಕೂಡ ಶಿಥಿಲಾವಸ್ಥೆಯಲ್ಲಿ ಇತ್ತು. ಈ ಜಡೇಸ್ವಾಮಿ ದಂಪತಿಗಳ ಸಮಾಧಿಯ ಸ್ಥಳವನ್ನು ಮರುನಿರ್ಮಾಣ ಮಾಡಿದ್ದು ಅಭಿವೃದ್ಧಿ ಪಡಿಸಿ ಜೀರ್ಣೋದ್ಧಾರ ಮಾಡಲಾಗಿದೆ.
ಉದ್ಘಾಟನೆ: ನೂತನ ಬಸವೇಶ್ವರ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಶಿಖರ ಕಳಸಸ್ಥಾಪನಾ ಸಮಾರಂಭವನ್ನು ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದು ಜ.22 ರಂದು ಭಾನುವಾರ ವಿವಿಧ ಪೂಜೆ ಹೋಮಗಳು ನಡೆಯಲಿವೆ. ಜ.23ರ ಸೋಮವಾರ ಕಳಸ ಸ್ಥಾಪನೆ ಹಾಗೂ ಧಾರ್ಮಿಕ ಸಭೆ ನಡೆಸಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಈ ದೇವಾಲಯ ಅಭಿವೃದ್ದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರು, ತಾಲೂಕಿನ ಹಾಲಿ ಮತ್ತು ಮಾಜಿ ಶಾಸಕರು ಹಲವು ರಾಜಕಾರಣಿಗಳು, ಮುಖಂಡರು ವಾಣಿಜ್ಯೋದ್ಯಮಿಗಳು ಧನಸಹಾಯ ನೀಡಿದ್ದು, ಶಿವಮೂರ್ತಿ ಕಳಸನೀಡಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಐತಿಹಾಸಿ ದೇವಾಲಯ ಅಭಿವೃದ್ದಿಯಾಗಿ ಉದ್ಘಾಟನೆಯಾಗುತ್ತಿದೆ.
ಯಜಮಾನ್ ಕೃಷ್ಣೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದು ಈ ವೇಳೆ ನಟರಾಜು, ಪ್ರಸನ್ನಮೂರ್ತಿ, ಸೋಮಶೇಖರ್, ಚಂದ್ರಾಚಾರ್, ಲೋಕೇಶ್, ಕುಮಾರ್, ನಿಂಗೇಗೌಡ, ಮಹೇಶ್, ಮಹದೇವ್, ಶೇಖರ್ ಸೇರಿದಂತೆ ಮತ್ತಿತರರು ಇದ್ದರು.