ನ್ಯೂಡೆಲ್ಲಿ: ಎಂಎಸ್‌ಪಿ ಸಮಿತಿಯು ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಅದನ್ನು ವಿಸರ್ಜಿಸುವಂತೆ ಸಾವಿರಾರು ಕಿಸಾನ್ ಪಂಚಾಯತ್ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ಸಾವಿರಾರು ರೈತರು ದಿಲ್ಲಿಯ ರಾಮ ಲೀಲಾ ಮೈದಾನದಲ್ಲಿ ಜಮಾಯಿಸಿದರು. ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದಂತೆ ನಡೆಯಲು 2,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. 2021ರ ಡಿಸೆಂಬರ್ 9ರಂದು ಮೋದಿಯವರ ಸರ್ಕಾರವು ನಮಗೆ ಲಿಖಿತ ರೂಪದಲ್ಲಿ ನೀಡಿದ ಆಶ್ವಾಸನೆಗಳನ್ನು ಕೂಡಲೆ ಈಡೇರಿಸುವಂತೆ ರೈತರ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿತು.
ಸಾಮಾನ್ಯ ಕನಿಷ್ಠ ದರ ಎಂಎಸ್‌ಪಿ ಬಗ್ಗೆ ಕಾನೂನು ಬದ್ಧತೆ ಕೋರಿ ಮತ್ತು ಎಂಎಸ್‌ಪಿ ಸಮಿತಿಯನ್ನು ವಿಸರ್ಜಿಸಲು ಆಗ್ರಹಿಸಿದ ರೈತರು, ಅನ್ನದಾತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದನ್ನು ಸರಿಪಡಿಸಲು ಕೇಂದ್ರ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಎಂಎಸ್‌ಪಿ ಸಮಿತಿಯು ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಅದನ್ನು ವಿಸರ್ಜಿಸುವಂತೆ ರೈತರು ಒತ್ತಾಯಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಕೇಳಿದರು. ಪಿಂಚಣಿ, ಸಾಲ ಮನ್ನಾ, ರೈತರ ಪ್ರತಿಭಟನೆ ವೇಳೆ ಸಾವಿಗೀಡಾದದವರ ಕುಟುಂಬಗಳಿಗೆ ಪರಿಹಾರ, ವಿದ್ಯುತ್ ಶುಲ್ಕ ಮನ್ನಾ ಮೊದಲಾದ ಬೇಡಿಕೆಗಳನ್ನು ಸಹ ರೈತರು ಸರಕಾರದ ಮುಂದಿಟ್ಟರು.
ಜೆಪಿಸಿ- ಜಂಟಿ ಸಂಸದೀಯ ಸಮಿತಿಗೆ ವಹಿಸಿರುವ 2022ರ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು. ಸಂಯುಕ್ತ ಕಿಸಾನ್ ಮೋರ್ಚಾದ ಜೊತೆಗೆ ಮಾತನಾಡಿದ ಬಳಿಕವಷ್ಟೆ ಈ ಮಸೂದೆಯನ್ನು ಮಂಡಿಸುವುದಾಗಿ ರೈತರಿಗೆ ಬರೆದು ಕೊಟ್ಟು ವಂಚಿಸುತ್ತಿರುವುದೇಕೆ ಎಂದು ರೈತರು ಪ್ರಶ್ನಿಸಿದರು.
ಕೃಷಿಗೆ ಉಚಿತ ಮತ್ತು ಗ್ರಾಮೀಣ ಮನೆ ಬಳಕೆಗೆ 300 ಯೂನಿಟ್ ಶುಲ್ಕವಿಲ್ಲದೆ ಮಿಂಚುರಿ ಪೂರೈಸುವಂತೆಯೂ ಕೇಳಿದರು. 2021ರ ಡಿಸೆಂಬರ್ ನಲ್ಲಿ ಬರೆದು ಆಶ್ವಾಸನೆ ನೀಡಿದ ಬಳಿಕ ರೈತರು ಹೊಸ ರೈತರ ಕಾಯ್ದೆ ವಿರುದ್ಧದ ತಮ್ಮ ಚಳವಳಿ ಹಿಂದೆಗೆದುಕೊಂಡಿದ್ದರು. ಆಗ ಬರೆದುಕೊಟ್ಟಂತೆ ರೈತರ ಮೇಲಿನ ಮೊಕದ್ದಮೆ ಹಿಂದೆಗೆದುಕೊಳ್ಳುವುದು, ಎಂಎಸ್‌ಪಿಗೆ ಕಾನೂನು ರಕ್ಷಣೆ ಯಾವುದೂ ಆಗಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಟ್ರಾಫಿಕ್ ಸಂಚಾರ, ಸಭೆ ಮೊದಲಾದವನ್ನು ಲಿಖಿತ ರೂಪದಲ್ಲಿ ರೈತರಿಗೆ ನೀಡಿ ರೈತರಿಗೆ ಸೂಕ್ತ ರಕ್ಷಣೆ ನೀಡಿದ್ದರು.