ಚಿಕ್ಕನಾಯಕನಹಳ್ಳಿ : ಹತ್ತು ವರ್ಷಗಳ ಹಿಂದೆಯ ಅಪ್ಪ ಅಮ್ಮನನ್ನು ಮತ್ತು ಇತ್ತೀಚೆಗೆ ಆಸರೆಯಾಗಿದ್ದ ಅಜ್ಜಿಯನ್ನು ಕಳೆದುಕೊಂಡ ಮೂವರು ಸಹೋದರಿಯರು ಯಾರು ಆಸರೆ ಇಲ್ಲದ್ದರಿಂದ ನಮನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬರಕನಹಾಲ್ ತಾಂಡಾದ ರಂಜಿತಾ (24), ಚಂದನಾ(21 ) ಹಾಗೂ ಬಿಂದು (18) ಆತ್ಮಹತ್ಯೆ ಮಾಡಿಕೊಂಡು ಮೂವರು ಸಹೋದರಿಯರು. ಅನಾಥರಾಗಿದ್ದ ಈ ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮನಕಲುಕುವಂತಿದೆ.
ಈ ಸಹೋದರಿಯರು ಕಳೆದ 9 ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಶವಗಳು ಕೊಳೆತು ವಾಸನೆ ಬಂದ ಬಳಿಕ ಸ್ಥಳೀಯರು ಗಮನಿಸಿದ್ದರಿಂದ ಗುರುವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
10 ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದರೆ ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ವಯೋಸಹಜವಾಗಿ ಮೃತಪಟ್ಟಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್ಪಿ ಸಿದ್ಧಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.