ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡುವುದಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಮತ್ತು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಸಿಟ್ಟಿಗೆದ್ದಿದ್ದು, ಶೇ.25ರಷ್ಟು ವೇತನ ಹೆಚ್ಚಳ ಮಾಡಲೇ ಬೇಕು ಇಲ್ಲ ಮುಷ್ಕರ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ವೇತನ ಸಂಬಂಧ ಬುಧವಾರ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಕೆಎಸ್ಆರ್‌ಟಿಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ನಡುವೆ ಸಚಿವ ಶ್ರೀರಾಮುಲು ನಡೆಸಿದ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ವೇತನ ಹೆಚ್ಚಳದ ಚೆಂಡು ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ.
ಆದರೆ ಸಿಎಂ ಶೇ.15ರಷ್ಟು ಹೆಚ್ಚಳ ಮಾಡುವುದಾಗಿ ಮಾಧ್ಯಮಗಳ ಮುಂದೆ ಇಂದು (ಗುರುವಾರ) ಹೇಳಿಕೆ ನೀಡಿದ್ದಾರೆ. ಅದನ್ನು ಸಾರಿಗೆ ನೌಕರರ ಸಂಘಟನೆಗಳು ಸುತರಾಮ್ ಒಪ್ಪದೆ ಮುಷ್ಕರ ಮಾಡುವುದಕ್ಕೆ ಮುಂದಾಗುವುದಾಗಿ ತಿಳಿಸಿವೆ. ಹೀಗಾಗಿ ಮತ್ತೆ ಸಿಎಂ ಬೊಮ್ಮಾಯಿ ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಇನ್ನು ಸಾರಿಗೆ ನೌಕರರಿಗೆ ಶೇ.14ರಷ್ಟು ವೇತನ ಹೆಚ್ಚಿಸುವ ರಾಜ್ಯ ಸರ್ಕಾರದ ಭರವಸೆಯನ್ನು ಸಾರಿಗೆ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸುವ ಮೂಲಕ ತಿರಸ್ಕರಿಸಿದ್ದರು. ಅಲ್ಲದೆ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಹೀಗಾಗಿ ಬುಧವಾರ ಕರೆದಿದ್ದ 2ನೇ ಸಭೆಯೂ ವಿಫಲವಾದ ಕಾರಣ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗಿದೆ. ಇಲ್ಲ ಇದೇ ರೀತಿ ಮೊಂಡುತನ ಪ್ರದರ್ಶಿಸಿ ಬೇಡಿಕೆ ಈಡೇರಿಸದಿದ್ದರೆ ಮಾ.21ರವರೆಗೂ ಕಾದು ನೋಡಿ ಮುಷ್ಕರ ಮಾಡವುದು ಖಚಿತ ಎಂದು ಖಡಕ್ ಎಚ್ಚರಿಕೆ ರವಾನಿಸಿವೆ ಸಂಘಟನೆಗಳು.
ಇನ್ನು ಮಾರ್ಚ್ 8 ರ ಸಭೆಯಲ್ಲಿ ಸಾರಿಗೆ ಸಚಿವರು ಶೇ. 8-10 ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು, ಕೆಎಸ್‌ಆರ್‌ಟಿಸಿ ಎಂಡಿ ಶೇ. 10-14 ರಷ್ಟು ಹೆಚ್ಚಳ ಭರವಸೆ ನೀಡಿದರು. ಆದರೆ, ಸರ್ಕಾರವು ಸರ್ಕಾರಿ ನೌಕರರಿಗೆ ಶೇ. 17 ಮತ್ತು ಕೆಪಿಟಿಸಿಎಲ್ ನೌಕರರಿಗೆ ಶೇ.20 ರಷ್ಟು ಮಧ್ಯಂತರ ಪರಿಹಾರವನ್ನು ನೀಡಿದೆ ಹೀಗಾಗಿ ನಮ್ಮ ವೇತನವನ್ನು ಶೇ.25ರಷ್ಟು ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಯುಗಾದಿಯ ಒಂದು ದಿನ ಮುಂಚಿತವಾಗಿಯೇ ಮಾ.21 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರ ಸಂಘಟನೆಗಳು ಒಗ್ಗಟ್ಟಾಗಿ ನಿಂತಿವೆ. ಒಂದು ವೇಳೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಒಮ್ಮತದ ನಿರ್ಧಾರ ಬಾರದೇ ಹೋದರಲ್ಲಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಂದ ತಮ್ಮ ಊರುಗಳಿಗೆ ತೆರಳುವ ಲಕ್ಷಾಂತರ ಜನರು ಸಿಲುಕಲಿದ್ದಾರೆ.