Thursday, October 31, 2024
NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ನಾವು ಸಾರಿಗೆ ನೌಕರರು ಶಾಪಗ್ರಸ್ಥರಾಗಿದ್ದೇವೆ – ಮುಕ್ತಗೊಳಿಸಬೇಕಾದವರು ವ್ಯಾಘ್ರರಾಗದಿರಿ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದುಡಿಮೆಯನ್ನು ನಿಷ್ಠೆಯಿಂದ ನಂಬಿ ಹೋರಾಟದ ಮಾರ್ಗದಲ್ಲಿ ಬದುಕುವವರಿಗೆ ಯಶಸ್ಸು ತಾನೇ ಒಲಿದು ಬರುತ್ತದೆ ಎಂಬುದಕ್ಕೆ ವಿರುದ್ಧವಾಗಿ ಇಂದು ನಾವೇ ಸಾಕ್ಷಿಯಾಗಿ ನಿಂತಿದ್ದೇವೆ. ಬಿಜೆಪಿ ಸರ್ಕಾರದ ಸಿಎಂ ಮತ್ತು ಸಾರಿಗೆ ಸಚಿವರು ಹುಸಿ ಭರವಸೆ ಜತೆಗೆ ನಮ್ಮ ಕರ್ತವ್ಯ ನಿಷ್ಠೆಯನ್ನು ಕಂಡರೂ ನಮ್ಮ ಜತೆಗೆ ತೀವ್ರ ಪೈಪೋಟಿಗೆ ಬಿದ್ದವರಂತೆ ರಾಜ್ಯದ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ನಮ್ಮನ್ನು ನಡೆಸಿಕೊಳ್ಳುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೀಗೆಂದು ಅಳಲು ತೋಡಿಕೊಳ್ಳುತ್ತಿರುವವರು ಬೇರೆ ಯಾರು ಅಲ್ಲ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರು. ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಾವು ಸಮಸ್ತ ಸಾರಿಗೆ ನೌಕರರಿಗೆ ಒಳ್ಳೆದನ್ನೇ ಬಯಸುತ್ತೀರಿ ಎಂದುಕೊಂಡಿದ್ದೆವು. ತಮ್ಮ ಅಧಿಕಾರವಧಿಯಲ್ಲಿ ನಮ್ಮ ರಾಜ್ಯ ರಾಮರಾಜ್ಯವಾಗಿ ನಾವು ರಾಮನಂತಿರುವ ನಿಮ್ಮ ತೆಕ್ಕೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತೇವೆ ಎಂದೇ ಭಾವಿಸಿದ್ದೆವು. ಆದರೆ ಆ ಭಾವನೆಗೆ ನೀವು ಎಳ್ಳಷ್ಟು ಬೆಲೆ ಕೊಡಲೇ ಇಲ್ಲ.

ಸಾರಿಗೆ ನೌಕರರಾದ ನಾವು ಮುಷ್ಕರದ ಸಮಯದಲ್ಲಿ ನಿಮ್ಮ ಸರ್ಕಾರದ ಮತ್ತು ಕೆಲ ರಣಹೇಡಿ ಅಧಿಕಾರಿಗಳ ಕುತಂತ್ರಕ್ಕೆ ಒಳಗಾಗಿ ವಜಾ, ಪೊಲೀಸ್‌ ಪ್ರಕರಣ, ವರ್ಗಾವಣೆ ಮತ್ತು ಅಮಾನತು ಪ್ರಕರಣಗಳನ್ನು ಎದುರಿಸುವಂತಾಗಿದೆ. ಈ ಬಗ್ಗೆ ತಮ್ಮಲ್ಲಿ ನೂರಾರು ಮನವಿಗಳನ್ನು ಸಲ್ಲಿಸಿ ಸರಿಪಡಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದೂ ಆಗಿದೆ. ಆದರೂ ನಿಮ್ಮ ಮನಸ್ಸು ಮಾತ್ರ ಕರಗಲೇ ಇಲ್ಲ.

ಮಾನ್ಯರೇ ಸಾರಿಗೆ ನೌಕರರಾದ ನಾವು ಹಗಲಿರುಳು ಮಳೆ, ಬಿಸಿಲು, ಹಬ್ಬ-ಹರಿದಿನ ಎನ್ನದೆ ಅತಿ ಹೆಚ್ಚು ಸಮಯ ಒತ್ತಡದಲ್ಲಿ ಕುಟುಂಬವನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರದ ಒಂದು ಅಂಗವಾಗಿದ್ದೇವೆ. ಇತರ ಇಲಾಖೆಯ ನಿಗಮಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದು ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ.

ಕಳೆದ 7 ವರ್ಷಗಳಿಂದ ಈ ಎಲ್ಲ ಕಷ್ಟ-ನಷ್ಟ ಅನುಭವಿಸಿಕೊಂಡು ಶಾಂತಿಯುತವಾಗಿ ನಮ್ಮ ಕಾಯಕವನ್ನು ಮಾಡುತ್ತಲೇ ಬರುತ್ತಿದ್ದೇವೆ. ಇದರ ಜತೆಗೆ ನಮ್ಮ ನೋವುಗಳನ್ನು ನಿಮ್ಮ ಬಳಿ ವ್ಯಕ್ತಪಡಿಸುವ ಸಲುವಾಗಿ ಕಳೆದ 2021ರ ಏಪ್ರಿಲ್‌ ತಿಂಗಳಿನಲ್ಲಿ ಹೋರಾಟ ಮಾಡಿದ್ದೆವು. ನಮ್ಮ ಉದ್ದೇಶ ಇಷ್ಟೆ, ಎಲ್ಲ ಸವಲತ್ತುಗಳನ್ನು ಜನಪರ ಸರ್ಕಾರ ಇದ್ದಾಗ ಮಾತ್ರ ಪಡೆಯಬಹುದೆಂದು. ಈ ಹಿನ್ನೆಲೆಯಲ್ಲಿ ನಿಮ್ಮ ಗಮನಸೆಳೆಯಲು ಹೋರಾಟ ಮಾಡಿದ್ದೆವು. ಇದರ ಹೊರತು ನಮಗೆ ಅನ್ಯ ಉದ್ದೇಶ ಇರಲಿಲ್ಲ.

ತಮಗೆ ತಿಳಿದಿರುವಂತೆ ಈ ಹೋರಾಟದ ಹಾದಿಯಲ್ಲಿ ಆಡಳಿತ ವರ್ಗ ಮುಷ್ಕರ ಸಮಯದಲ್ಲಿ ನೌಕರರ ವಿರುದ್ಧ ತೆಗೆದುಕೊಂಡ ಕ್ರಮಗಳಾದ ವರ್ಗಾವಣೆ, ವಜಾ ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ತೆರವುಗೊಳಿಸಿ ಏಪ್ರಿಲ್ 6- 2021ರ ಸಂದರ್ಭದಲ್ಲಿ ಇದ್ದಂತಹ ಸ್ಥಿತಿಗೆ ತರಬೇಕೆಂದು ಮನವಿ ಮಾಡಿದ್ದೆವು.

ರಾಜ್ಯದ್ಯಂತ ನೌಕರರ ಮೇಲೆ ಜರುಗಿಸಿರುವ ಪೊಲೀಸ್ ಪ್ರಕರಣಗಳ ರದ್ಧತಿ ಮತ್ತು ಕಲಂ -23ರ ರದ್ಧತಿ, ಮುಷ್ಕರ ಹಾಗೂ ನಂತರದ ದಿನಗಳ ವೇತನ ಸರಿಪಡಿಸುವಿಕೆಯನ್ನು ತಾವು ಮಾಡಿಕೊಡಿ ಎಂದು ಅಂಗಲಾಚಿದ್ದೆವು.

ಇದಿಷ್ಟೇ ಅಲ್ಲದೆ ಸುಮಾರು 300 ರಿಂದ 450 ಕಿಲೋಮೀಟರ್ ದೂರಕ್ಕೆ ಮಹಿಳೆಯರು ಎಂದು ಕೂಡ ನೋಡದೆ ಅಮಾನವೀಯವಾಗಿ ವರ್ಗಾವಣೆ ಮಾಡಿದ್ದೀರಿ. ಈ ಮೂಲಕ ಒಂದು ರೀತಿ ನಮ್ಮ ಮೇಲೆ ದರ್ಪವನ್ನು ಮೆರೆದಿದ್ದೀರಿ. ಈ ವೇಳೆ ನೌಕರರ ಕುಟುಂಬಗಳ ಭವಿಷ್ಯ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯದ ಬಗ್ಗೆ ನಾಡಿನ ಸರ್ವವನ್ನು ಸರಿ ಸಮಾನವಾಗಿ ಕಾಣಬೇಕಿದ್ದ ತಾವು ಮೃಗದಂತೆ ವರ್ತಿಸಿದ್ದೀರಿ.

ಆದರೂ ಅದನ್ನೆಲ್ಲ ಸಹಿಸಿಕೊಂಡು ನಾವು ಮತ್ತೆ ಮತ್ತೆ ನಿಮ್ಮ ಬಳಿ ಬಂದು ಅಂಗಲಾಚಿದ್ದೆವು (ಈಗಲೂ ಅದನ್ನೇ ಮಾಡುತ್ತಿದ್ದೇವೆ). ಆದರೂ ನಿಮ್ಮ ಆ ಮೃಗೀಯ ಮನಸ್ಸು ನಮ್ಮ ಕಡೆ ಒಲವನ್ನೇ ತೋರಲಿಲ್ಲ. ಮಗು ಅಮ್ಮನ ತೊಡೆಯಮೇಲೆ ಹೇಸಿಗೆ ಮಾಡಿದ ಮಾತ್ರಕ್ಕೆ ಆ ಮಗುವನ್ನು ಅಮ್ಮ ದೂರ ಮಾಡುವರೆ, ಇಲ್ಲತಾನೆ.

ನೀವು ನಾಡಿನ ದೊರೆಯಾಗಿದ್ದುಕೊಂಡು ನಾವು ಮಾಡಿದ್ದು ತಪ್ಪು ಎಂದಾದರೆ ಅಷ್ಟಕ್ಕೆ ನಮಗೆ ಈರೀತಿ ತೊಂದರೆ ಕೊಟ್ಟರೆ ಅಮ್ಮನ ಸ್ಥಾನದಲ್ಲಿರುವ ನೀವು ಮಗುವಿನ ಸ್ಥಾನದಲ್ಲಿರುವ ನಮ್ಮ ಪರಿಸ್ಥಿತಿ ಏನಾಗಲಿದೆ ಎಂಬುದರ ಅರಿವು ನಿಮಗಾಗಲೇ ಇಲ್ಲ. ಅಂದರೆ ನೀವು ಅಮ್ಮನ ಸ್ಥಾನದಲ್ಲಿ ಇರುವುದಕ್ಕೆ ಯೋಗ್ಯರಲ್ಲ ಎಂಬುದನ್ನು ತೋರಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ವರ್ತಿಸಿದ್ದೀರಾ?

ನೋಡಿ ಈಗಲೂ ಕಾಲ ಮಿಂಚಿಲ್ಲ, ಮುಷ್ಕರದ ಸಮಯದಲ್ಲಿ ರಾಜ್ಯಾದ್ಯಂತ ನೌಕರರ ಮೇಲೆ ಆದ ಪೊಲೀಸ್ ದೂರುಗಳು, ವೇತನವು ಇಲ್ಲದೆ, ಕೆಲಸವು ಇಲ್ಲದೆ ಜೈಲು ಹಾಗೂ ಕೋರ್ಟ್‌ಗಳನ್ನು ಅಲೆದಾಡುತ್ತಿರುವ ನಮ್ಮ ನರಕಯಾತನೆಯ ಜೀವನವನ್ನು ನೀವು ಕೊನೆಗಾಣಿಸಿ ಇದು ನಮ್ಮ ಮನವಿಯಲ್ಲ ತಾಯಿಯ ಬಳಿ ಹಸಿದ ಮಗು ಹಠಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿ ಎಂದು ಭಾವಿಸಿ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ ಎಂದು ಆಗ್ರಹಿಸುತ್ತಿದ್ದೇವೆ.

ಎಲ್ಲವನ್ನು ಮನಗಂಡಿರುವ ರಾಜ್ಯದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ನೀವು (ಸಿಎಂ) ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣವನ್ನು ರದ್ದುಪಡಿಸಿ, ಶಾಶ್ವತ ಪರಿಹಾರ ಕಲ್ಪಿಸುತ್ತೀರೆಂದು ಇನ್ನೂ ಕೂಡ ನಂಬಿದ್ದೇವೆ. ಅದರ ಜತೆಗೆ ನಮಗೆ ಸಲ್ಲಬೇಕಿರುವ ವೇತನವನ್ನು ವೇತನ ಆಯೋಗ ಮಾದರಿಯಲ್ಲೇ ಕೊಡಬೇಕು ಎಂದು ಆಗ್ರಹಪೂರಕವಾಗಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ.

ಇಂತಿ
ನಿಮ್ಮ 4ನಿಗಮಗಳ ಸಾರಿಗೆ ನೌಕರರು

Leave a Reply

error: Content is protected !!
LATEST
ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ