ಹೊಸಕೋಟೆ : ರಕ್ತದೊತ್ತಡ,ಸಕ್ಕರೆ ಖಾಯಿಲೆ ನಿಯಂತ್ರಣ ಸೇರಿದಂತೆ ಆರೋಗ್ಯಯುತ ಜೀವನ ನಡೆಸಲು ಯೋಗಾಭ್ಯಾಸವು ರಹದಾರಿಯಾಗಿದೆ.ಸದೃಢ ಮನಸ್ಸು ಮತ್ತು ಆರೋಗ್ಯಕ್ಕೆ ಯೋಗಾಸನಗಳು ಪೂರಕ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಡಿಗೇನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಮಾಡಿ, ಇಂದು ಭಾನುವಾರ ಬೆಳಗ್ಗೆ ವಿದ್ಯಾರ್ಥಿಗಳ ಯೋಗ ಶಿಬಿರದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಸತತ ಯೋಗಾಭ್ಯಾಸದಿಂದ ಒತ್ತಡ ರಹಿತವಾದ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನಗಳಿಂದ ಏಕಾಗ್ರತೆ ಸಾಧ್ಯ. ನಾನು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಬಡ್ಡಿ ಆಟಗಾರನಾಗಿದ್ದೆ ಹೀಗಾಗಿ ಈವರೆಗೂ ಬಳಿ ರಕ್ತದೊತ್ತಡ, ಮಧುಮೇಹ ಸುಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ: ಮೊರಾರ್ಜಿ ದೇಸಾಯಿ ವಸತಿ ಪ.ಪೂ.ಕಾಲೇಜು ಪ್ರಾಚಾರ್ಯ ಕಿರಣ ಕುಮಾರ್, ವಿದ್ಯಾರ್ಥಿಗಳಿಗೆ ಉಚಿತ ಯೋಗಾಭ್ಯಾಸ ತರಬೇತಿ ನೀಡುವ ಆನಂದ್ ಅವರನ್ನು ಸಚಿವರು ಸನ್ಮಾನಿಸಿದರು.
ವಸತಿ ಕಾಲೇಜಿನಲ್ಲಿ ವಾಸ್ತವ್ಯದ ನೆನಪಿಗೆ ಸಚಿವರು ಸಸಿಗಳನ್ನು ನೆಟ್ಟರು. ಪೌರಾಡಳಿತ, ಸಣ್ಣ ಕೈಗಾರಿಕೆ,ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು (ಎಂಟಿಬಿ), ಜಿಲ್ಲಾಧಿಕಾರಿ ಆರ್.ಲತಾ
ಮತ್ತಿತರರು ಇದ್ದರು.