ಕಲಬುರಗಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ನಗರದ ನಾಲ್ಕು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದ್ದಾರೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರು ಮತ್ತು ಇನ್ನಿತರ ಕಾಯಿಲೆವುಳ್ಳ ನಗರದ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಉಚಿತವಾಗಿ ಔಷಧಿಗಳನ್ನು ಪಡೆದುಕೊಳ್ಳಬಹುದಾಗಿದೆ. ಕಲಬುರಗಿ ನಗರದ ವಿವಿಧ ಬಡಾವಣೆಯ ಸಾರ್ವಜನಿಕರು ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಎಲ್ಲೆಲ್ಲಿವೆ ಆರೋಗ್ಯ ಕೇಂದ್ರಗಳು
ಕಲಬುರಗಿ ಮಹಾನಗರ ಪಾಲಿಕೆಯ ಹೊಸ ಕಟ್ಟಡದಲ್ಲಿ, ಕಲಬುರಗಿ ತಾರಫೈಲ್‍ನ ಕನ್ನಡ ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಬುರಗಿ ಬ್ರಹ್ಮಪೂರ ಕೃಷ್ಣ ನಗರ ಬ್ಲಾಕ್ ನಂ. 02 ದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲಬುರಗಿ ಸುಂದರ ನಗರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮಹಾನಗರ ಪಾಲಿಕೆ ಹೊಸ ಕಟ್ಟಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 6 ಜನ ಹೊರ ರೋಗಿಗಳು, ಸುಂದರ ನಗರ ಕೇಂದ್ರದಲ್ಲಿ ಒಟ್ಟು 53 ಹೊರ ರೋಗಿಗಳು, ತಾರಫೈಲ್ ಕೇಂದ್ರದಲ್ಲಿ ಒಟ್ಟು 30 ರೋಗಿಗಳು ಹಾಗೂ ಬ್ರಹ್ಮಪೂರ ಕೇಂದ್ರದಲ್ಲಿ ಒಟ್ಟು 25 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿ ಕೂಡಾ ನೀಡಲಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಸಹ ಇರುತ್ತದೆ. ಸಾರ್ವಜನಿಕರು ಪಾಲಿಕೆಯ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 8310964779ಗೆ ಕರೆ ಮಾಡಿ ಅಥವಾ ವಾಟ್ಸ್‍ಆಪ್ ಮೂಲಕ ಸಂದೇಶ ಕಳುಹಿಸಿ ಇದರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಗರ್ಭಿಣಿಯರಿಗೆ ವೃದ್ಧರಿಗೆ ತುಂಬಾ ಅನುಕೂಲ