ಬಾಗಲಕೋಟೆ: ವಿಪರೀತ ಹೊಟ್ಟೆ ನೋವಿನಿಂದ ನರಳುತ್ತಾ, ವಾಂತಿ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸ್ವತಃ ಆ ವ್ಯಕ್ತಿಗೆ ಹಾಗೂ ವೈದ್ಯರಿಗೇ ಅಚ್ಚರಿ ಕಾದಿತ್ತು!
ಹೌದು! ಬಾಗಲಕೋಟೆಯ ವ್ಯಕ್ತಿಯೊಬ್ಬರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಆಸ್ಪತ್ರೆಯಲ್ಲಿ ಎಕ್ಸ್-ರೇ ಪರೀಕ್ಷೆ ಮತ್ತು ಎಂಡೋಸ್ಕೋಪಿ ನಡೆಸಿದ ನಂತರ ವೈದ್ಯರೇ ಬೆಚ್ಚಿಬಿದ್ದಾರೆ.
58 ವರ್ಷದ ದ್ಯಾಮಪ್ಪ ಎಂಬ ವ್ಯಕ್ತಿಯೇ ವೈದ್ಯರನ್ನೇ ಬೆಚ್ಚಿ ಬೀಳಿಸಿದ ರೋಗಿ. ಆತನ ಹೊಟ್ಟೆಯಲ್ಲಿ187 ನಾಣ್ಯಗಳು ಪತ್ತೆಯಾಗಿವೆ. ಆ ನಾಣ್ಯಗಳನ್ನು ಸದ್ಯ ವೈದ್ಯರು ಹೊರತೆಗೆದಿದ್ದಾರೆ. 5 ರೂ. ಮೌಲ್ಯದ 56 ನಾಣ್ಯಗಳು, 2 ರೂ. ಮೌಲ್ಯದ 51ನಾಣ್ಯಗಳು, 1 ರೂ. ಮೌಲ್ಯದ ೮೦ ನಾಣ್ಯಗಳು, ಒಟ್ಟು 462 ರೂ. ಮೌಲ್ಯದ ನಾಣ್ಯಗಳನ್ನು ನುಂಗಿದ್ದರು.
ನಾಣ್ಯಗಳ ತೂಕ 1.5 ಕೆಜಿ ಇತ್ತು. ಆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರು ಸ್ಕಿಜೋಫ್ರೇನಿಯಾ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು 2-3 ತಿಂಗಳ ಅವಧಿಯಲ್ಲಿ ಇಷ್ಟು ನಾಣ್ಯಗಳನ್ನು ನುಂಗಿದ್ದಾರೆ ಎಂದು ಹೇಳಿದರು.
ಶನಿವಾರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದ್ಯಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ನಾಣ್ಯಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಈ ಕುರಿತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಲ್ಲಿ ಒಬ್ಬರಾದ ಡಾ.ಈಶ್ವರ ಕಲಬುರಗಿ ಮಾತನಾಡಿ, ಹೊಟ್ಟೆಯು ವಿಪರೀತ ಹಿಗ್ಗಿದೆ, ಹೊಟ್ಟೆಯ ವಿವಿಧ ಭಾಗದಲ್ಲಿ ಸಾಕಷ್ಟು ನಾಣ್ಯಗಳು ಸಿಲುಕಿಕೊಂಡಿದ್ದವು. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ನಾವು ಎಲ್ಲ ನಾಣ್ಯಗಳನ್ನು ಹೊರತೆಗೆದಿದ್ದೇವೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ನೀರಿನ ಕೊರತೆ ಮತ್ತು ಇತರ ಸಣ್ಣ ಸಮಸ್ಯೆಗಳಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ನೀಡಲಾಯಿತು. ರೋಗಿಯು ಈಗ ಆರೋಗ್ಯವಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಕಿಜೋಫ್ರೇನಿಯಾದ ಲಕ್ಷಣಗಳು ಭ್ರಮೆಗಳು, ದಿಢೀರ್ ಚಿಂತನೆ ಮತ್ತು ಅಸಹಜ ನಡವಳಿಕೆಯು ಮೂಲವಾಗಿ ಇರುತ್ತದೆ ಎಂದು ಹೇಳಿದರು. ಒಟ್ಟಾರೆ ಈ ವಿಚಿತ್ರ ಘಟನೆಯೊಂದು ನಮ್ಮ ರಾಜ್ಯದ ಬಾಗಲಕೋಟೆಯಲ್ಲಿ ನಡೆದಿದ್ದು, ವೈದ್ಯರಿಗೂ ಸವಾಲಾಗಿ ಪರಿಣಮಿಸಿದ್ದು ಮರೆಯಲಾಗದ ಘಟನೆಯೇ ಎಂದು ಹೇಳಲಾಗುತ್ತಿದೆ.