ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ
ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಬೆಸ್ಕಾಂ, ಗೃಹ ಜ್ಯೋತಿ ಫಲಾನುಭವಿಗಳ ಪ್ರವರ್ಗಕ್ಕೆ (ಜಾತಿ) ಸಂಬಂಧಿಸಿದ ಮಾಹಿತಿಯು ಕಡ್ಡಾಯವಲ್ಲ, ಅದು ಕೇವಲ ಐಚ್ಛಿಕ (Optional) ಆಗಿದೆ. ಜಾತಿ ವಿವರ ನೀಡುವುದು ಸಂಪೂರ್ಣವಾಗಿ ಸಾರ್ವಜನಿಕರ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದೆ.

ಬೆಂಗಳೂರು: ಕಳೆದ ಮೂರು ದಿನಗಳಿಂದ ಅಂದರೆ ಜುಲೈ 1 ರಿಂದ ರಾಜ್ಯಾದ್ಯಂತ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ (Gruha Jyothi Scheme) ಫಲಾನುಭವಿಗಳ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಈ ನಡುವೆ ಈ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಜಾತಿ (Caste) ವಿವರ ನೀಡುವುದು ಕಡ್ಡಾಯವಲ್ಲ ಎಂದು ಇಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.
ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಮತ್ತು ಮುದ್ರಿತ ಘೋಷಣಾ ಪತ್ರದ ಮೂಲಕ ಈ ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಇದರಲ್ಲಿ ಜಾತಿ ಪ್ರಮಾಣಪತ್ರ ಕೇಳಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಫಲಾನುಭವಿಯ ಪ್ರವರ್ಗ (ಜಾತಿ ಪ್ರಮಾಣಪತ್ರ) ಹಾಗೂ ಉಪಜಾತಿಯ ವಿವರಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಬೆಸ್ಕಾಂ, ಗೃಹ ಜ್ಯೋತಿ ಫಲಾನುಭವಿಗಳ ಪ್ರವರ್ಗಕ್ಕೆ (ಜಾತಿ) ಸಂಬಂಧಿಸಿದ ಮಾಹಿತಿಯು ಕಡ್ಡಾಯವಲ್ಲ, ಅದು ಕೇವಲ ಐಚ್ಛಿಕ (Optional) ಆಗಿದೆ. ಜಾತಿ ವಿವರ ನೀಡುವುದು ಸಂಪೂರ್ಣವಾಗಿ ಸಾರ್ವಜನಿಕರ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದೆ.
ಯಾವುದೇ ಫಲಾನುಭವಿಗೆ ತಮ್ಮ ಜಾತಿಯ ವಿವರವನ್ನು ನೀಡಲು ಇಷ್ಟವಿಲ್ಲದಿದ್ದರೆ, ಅದನ್ನು ನಿರಾಕರಿಸುವ ಸಂಪೂರ್ಣ ಹಕ್ಕಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಅಪ್ಲಿಕೇಶನ್ನಲ್ಲಿರುವ ಮಾಹಿತಿ ನೀಡಲು ನಿರಾಕರಣೆ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಗೊಂದಲ ನಿವಾರಣಗೆ ಸಹಾಯವಾಣಿಗೆ ಕರೆ ಮಾಡಿ: ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯ ಪರಿಶೀಲನೆಯ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಫಲಾನುಭವಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಲು ಬೆಸ್ಕಾಂ ನಿಗಮ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ.
ಹೀಗಾಗಿ ಗ್ರಾಹಕರು 9480816111, 9480816112, 9480816113 ಮತ್ತು 9480816114. ಸಹಾಯವಾಣಿಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಒಳಗಡೆ ಕರೆ ಮಾಡಿ ಸಮಸ್ಯೆ/ ಗೊಂದಲವನ್ನು ಪರಿಹರಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







