ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಬನ್ನಿ ವೃಕ್ಷಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸುತ್ತಿದ್ದಾರೆ.
ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ನಡೆಯಲಿದೆ. ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ.
ಅಂಬಾರಿಯಲ್ಲಿ ಪ್ರತಿಷ್ಠಾಪನೆಯಾಗುವ ದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಭಾಗಿಯಾಗುವರು.
ಅಂಬಾರಿ ಹೊರಲು ಅಭಿಮನ್ಯು ಫಿಟ್: ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಗಜ ಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) ಕೂಡ ಅಂಬಾರಿ ಹೊರಲು ಫಿಟ್ ಆಗಿದ್ದಾನೆ.
ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗಲು ಗಜಪಡೆ ಸಿದ್ಧವಾಗಿದೆ. ಅರಮನೆಗೆ ಆಗಮಿಸಿದ್ದ ಗಜ ತಂಡದಲ್ಲಿ ಈ ಬಾರಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರೋದು 9 ಆನೆಗಳು ಮಾತ್ರ.
ಈ ಬಾರಿ ಜಾನಪದ ತಂಡ, ಸ್ತಬ್ಧ ಚಿತ್ರಗಳು ಹೆಚ್ಚು ಇರುವ ಕಾರಣ ಮೆರವಣಿಗೆಯಲ್ಲಿ ಹೆಚ್ಚು ಆನೆಗಳು (Elephant) ಭಾಗಿಯಾಗಲು ಕಷ್ಟವಾಗುವ ಹಿನ್ನೆಲೆ 9 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಜಂಬೂ ಸವಾರಿ ಆನೆಗಳು: * ಕ್ಯಾಪ್ಟನ್ – ಅಭಿಮನ್ಯು * ನಿಶಾನೆ ಆನೆ – ಅರ್ಜುನ * ನೌಫತ್ ಆನೆ- ಗೋಪಿ * ಕುಮ್ಕಿ ಆನೆಗಳು – ಕಾವೇರಿ ಮತ್ತು ಚೈತ್ರ * ಧನಂಜಯ, ಮಹೇಂದ್ರ * ಭೀಮ, ಗೋಪಾಲಸ್ವಾಮಿ ಆನೆಗಳು ಭಾಗಿ ಆಗಲಿವೆ. ಗಜಪಡೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸುವ ಬಗ್ಗೆ ಡಿಸಿಎಫ್ ಕರಿಕಾಳನ್ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಂಬೂ ಸವಾರಿ ಪ್ರಮುಖ ಆಕರ್ಷಣೆ ಕ್ಯಾಪ್ಟನ್ ಕೂಲ್ ಅಭಿಮನ್ಯು ಮೂರನೇ ಬಾರಿಗೆ ಅಂಬಾರಿ ಹೊರಲಿದ್ದಾನೆ. ಜಂಬೂ ಸವಾರಿ ವೇಳೆ ಆನೆಗಳ ಆರೋಗ್ಯ ಸುರಕ್ಷತೆ ದೃಷ್ಠಿಯಿಂದ ನಾಲ್ಕು ವೈದ್ಯರ ತಂಡಗಳ ನಿಯೋಜಿಸಲಾಗಿದೆ.
ರಾಜ ಮಾರ್ಗದಲ್ಲಿ ಜಂಬೂ ಸವಾರಿ ಹಾದು ಹೋಗುವ ಸರ್ಕಲ್‍ಗಳಾದ ಕೆ.ಆರ್ ಸರ್ಕಲ್, ಆರ್.ಎಂ.ಸಿ ಸರ್ಕಲ್ ಹಾಗೂ ಹೈವೆ ಸರ್ಕಲ್ ಗಳಲ್ಲಿ ವೈದ್ಯರ ತಂಡ ಇರಲಿದೆ. ಮತ್ತೊಂದು ತಂಡ ಗಜಪಡೆ ಜೊತೆಯಲ್ಲೆ ಹೆಜ್ಜೆ ಹಾಕಲಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಎಲ್ಲ ತಂಡಗಳು ನಿಗದಿತ ಸರ್ಕಲ್‍ಗಳಲ್ಲಿ ನಿಯೋಜನೆ ಗೊಳ್ಳಲಿವೆ.
ಒಟ್ಟಾರೆ ಇದೇ ಮೊದಲ ಬಾರಿಗೆ ದೀಪಾಲಂಕಾರಗಳ ನಡುವೆ ಜಂಬೂ ಸವಾರಿ ಸಾಗಲಿದ್ದು, ವಿದ್ಯುತ್ ದೀಪಾಲಂಕಾರಗಳ ನಡುವೆ ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಹೇಗೆ ನಾಡದೇವತೆಯನ್ನು ಮೆರವಣಿಗೆ ಮಾಡ್ತಾನೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.