-
ನೌಕರರು ಮತ್ತು ಸಮಸ್ತ ಸಾರಿಗೆ ನೌಕರರ ಕುಟುಂಬದವರ ಉಳಿವಿಗಾಗಿ ನಿರಂತರ ಸೈಕಲ್ ತುಳಿಯುತ್ತಿರುವ ನೌಕರರು
-
ನೂರಾರು ಕಿಮೀ ದೂರದಲ್ಲಿ ಕುಟುಂಬ ಬಿಟ್ಟು ನೌಕರರ ಏಳಿಗೆಗೆ ಶ್ರಮಿಸುತ್ತಿರುವ ಶ್ರಮಜೀವಿಗಳಿಗೆ ಸಾಥ್
ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾ 29ನೇ ದಿನವಾದ ಇಂದು ಧಾರವಾಡದಲ್ಲಿ ಸಂಗಮಗೊಂಡು ನೂರಾರು ನೌಕರರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.
ಕಳೆದ 28ದಿನಗಳಿಂದಲೂ ನಿರಂತರವಾಗಿ ನೌಕರರ ಕೂಟ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಜಾಥಾದಲ್ಲಿ ಪಾಲ್ಗೊಂಡಿರುವ ನೌಕರರು ಜ್ವರದಿಂದ ಬಳಲುತ್ತಿದ್ದರೂ ಅಲ್ಲಲ್ಲಿ ಆಸ್ಪತ್ರೆಗಳಿಗೆ ತೆರಳಿ ಔಷಧಗಳನ್ನು ಪಡೆದು ಮತ್ತೆ ಜಾಥಾ ಮುಂದುವರಿಸುತ್ತಿದ್ದಾರೆ.
ಇದಾವುದು ನಮ್ಮ ಸಾರಿಗೆ ನೌಕರರಿಗೆ ಗೊತ್ತಾಗುತ್ತಿಲ್ಲ. ಇನ್ನು ಇವರು ಮಾಡುತ್ತಿರುವ ಈ ಜಾಥಾ ಅವರ ಮನೆ ಕುಟುಂಬದವರ ಉದ್ಧಾರಕ್ಕಾಗಿ ಅಲ್ಲ. ಇದು ರಾಜ್ಯದ ನಾಲ್ಕೂ ನಿಗಮಗಳ ಸಮಸ್ತ ನೌಕರರು ಮತ್ತು ಅವರ ಕುಟುಂಬಕ್ಕಾಗಿ ಮಾಡುತ್ತಿರುವ ಜಾಥಾ. ಹೀಗಾಗಿ ಸೈಕಲ್ ಜಾಥಾ ಹೋದ ಕಡೆಯಲ್ಲೆಲ್ಲ ಅಭೂತಪೂರ್ವ ಬೆಂಬಲವನ್ನೂ ನೌಕರರು ನೀಡುತ್ತಿದ್ದಾರೆ.
ಇನ್ನು ಎಲ್ಲ ನೌಕರರು ಈ ಜಾಥಾದಲ್ಲಿ ಭಾಗವಹಿಸುವ ಹುಮ್ಮಸ್ಸು ಹೊಂದಿದ್ದಾರೆ. ಆದರೆ ಎಲ್ಲರೂ ಜಾಥಾದಲ್ಲಿ ಪಾಲ್ಗೊಂಡರೆ, ರಾಜ್ಯದಲ್ಲಿ ಸಾರಿಗೆ ಬಸ್ಗಳು ಸಂಪೂರ್ಣವಾಗಿ ಸ್ತಬ್ದವಾಗಲಿವೆ. ಹೀಗಾಗಿ ನಾಡಿನ 7 ಕೋಟಿ ಜನರಿಗೆ ತೊಂದರೆಯಾಗುವುದು ಬೇಡ, ಅವರಿಗಾಗಿ ನಾವು ಸೇವೆ ಸಲ್ಲಿಸುತ್ತಿದ್ದೇವೆ ಎಂಬ ಕಾರಣಕ್ಕೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಗೂ ಡಿಪೋಗಳಲ್ಲಿ ಸಂಗಮಗೊಳ್ಳುವ ಮೂಲಕ ತಮ್ಮ ಒಗ್ಗಟ್ಟಿನ ಶಕ್ತಿ ಪ್ರದೆಶಿಸುತ್ತಿದ್ದಾರೆ ನೌಕರರು.
ಜಿಲ್ಲೆಯಿಂದ ಜಿಲ್ಲೆಗೆ ವಾತಾವರಣದಲ್ಲಿ ಮತ್ತು ಆಹಾರದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಸೈಕಲ್ ಜಾಥಾ ನಿರತ ನೌಕರರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆಯೂ ಸ್ಥಳೀಯವಾಗಿ ನೌಕರರು ಅವರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವ ಮೂಲಕ ಮತ್ತು ಅವರು ವಾಸ್ತವ್ಯ ಹೂಡುವ ಸ್ಥಳದಲ್ಲಿ ಬೆಚ್ಚನೆಯ ಉಡುಪುಗಳು, ಹೊದಿಕೆಗಳನ್ನು ಒದಗಿಸಿಕೊಡಬೇಕಿದೆ.
ಇದರಿಂದ ನಿಮಗಾಗಿ ನೂರಾರು ಕಿಲೋ ಮೀಟರ್ನಲ್ಲಿ ತಮ್ಮ ಕುಟುಂಬದವರನ್ನು ಬಿಟ್ಟು ಬಂದು ಹೋರಾಡುತ್ತಿರುವ ನೌಕರರಿಗೂ ಖುಷಿಯ ಜೊತೆಗೆ ಹೋರಾಟಕ್ಕೂ ಆನೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಸಮಸ್ತ ನೌಕರರು ಎದೆಗುಂದದೆ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ದಾಪುಗಾಲು ಇಡಬೇಕಿದೆ.
ಇನ್ನು ಇಂದು ಧಾರವಾಡದಲ್ಲೂ ಸೈಕಲ್ ಜಾಥಾಕ್ಕೆ ಅಭೂತಪೂರ್ವ ಬೆಂಬಲವನ್ನು ಜಿಲ್ಲೆಯ ನೌಕರರು ನೀಡಿರುವುದು, ಅನಾರೋಗ್ಯದಿಂದ ಬಳಲುತ್ತಿರುವ ಜಾಥಾದ ನೌಕರರಲ್ಲಿ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ.
ಧಾರವಾಡದಲ್ಲಿ ಸಮಾಗಮಗೊಂಡ ಸೈಕಲ್ ಜಾಥಾ ಈಗ ಗದಗಕಡೆ ತನ್ನ ಯಾತ್ರೆ ಆರಂಭಿಸಿದೆ. ಗದಗದಲ್ಲಿ ನಾಳೆ ಸಮಾವೇಶಗೊಂಡು ಗದಗ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲಿದೆ.