ಬೆಂಗಳೂರು: ಸಾರಿಗೆ ನೌಕರರ (ksrtc employees) ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಾರಿಗೆ ನೌಕರರು ನಡೆಸುತ್ತಿರುವ ಸೈಕಲ್ ಜಾಥಾ ಮತ್ತು ಇತರ ಹೋರಾಟಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಸ್ಸಿ/ಎಸ್ಟಿ ಸಮನ್ವಯ ಸಮಿತಿ (SC/ST Coordination Committee) ಬೆಂಬಲ ನೀಡಿದೆ.
ಈ ವೇಳೆ ಮಾತನಾಡಿದ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಾವು ಕೂಡ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಜತೆಗೆ ಅಹಿಂದ ವರ್ಗದ ನೌಕರರನ್ನು ಹೆಚ್ಚಾಗಿ ವಜಾ ಮಾಡಲಾಗಿದ್ದು, ಅವರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕು ಎಂದು ಸಾರಿಗೆ ನಿಗಮಗಳಿಗೆ ಆಗ್ರಹಿಸಿದ್ದಾರೆ.
ಇನ್ನು ಕಳೆದ ಅಕ್ಟೋಬರ್ 10ರಿಂದ ಇಂದಿನವರೆಗೂ ಅಂದರೆ 45 ದಿನಗಳಿಂದ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸಿಗಬೇಕು ಎಂದು ಸುಮಾರು 17 ಜಿಲ್ಲೆಗಳನ್ನು 1800 ಕಿಮೀ ಕ್ರಮಿಸಿ ಜಾಥಾ ನಡೆಸುತ್ತಿದ್ದು, ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ.
ಏನು ಈ ಸೈಕಲ್ ಜಾಥಾ ನೌಕರರ ಹಿತದೃಷ್ಟಿಯಿಂದ ನಡೆಯುತ್ತಿದೆಯೋ ಅದಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ. ಇನ್ನು ನೌಕರರು ಕೇಳುತ್ತಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡ ಮುಂದಾಗಬೇಕು ಎಂದು ಒತ್ತಾತಿಸಿದರು.
ಬಳಿಕ ಸೈಕಲ್ ಜಾಥಾದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್ ಮತ್ತು ಅವರ ಸಂಘದ ಪದಾಧಿಕಾರಿಗಳಿಗೆ ಸಮಸ್ತ ಸಾರಿಗೆ ನೌಕರರ ಪತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕಾರಣ ನಮ್ಮ ಕಷ್ಟ ಮತ್ತು ನೋವುಗಳು ಸರ್ಕಾರಿ ನೌಕರರಿಗೆ ಅರ್ಥವಾಗುತ್ತದೆ. ನಮ್ಮನ್ನು ಇಷ್ಟು ವರ್ಷ ಆಳಿದ ಸಂಘಟನೆಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ನಮ್ಮ ಕಷ್ಟಗಳು ತಿಳಿಯುತ್ತಿಲ್ಲ. ಹೀಗಾಗಿ ನಮ್ಮ ಹೋರಾಟಕ್ಕೆ ಸಾಥ್ ನೀಡುತ್ತಿರುವ ಇವರೆಲ್ಲಿಗೂ ನಾವು ಅಭಾರಿಯಾಗಿದ್ದೇವೆ ಎಂದು ಹೇಳಿದರು.