ಪಾಂಡವಪುರ : ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಸ್ಮರಣಾರ್ಥ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಾಳೆಯಿಂದ (ನ.25) ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ `ಪುನೀತೋತ್ಸವ’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಾಸಕ ಸಿ.ಎಸ್.ಪುಟ್ಟರಾಜು ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ವೇದಿಕೆಯ ಸಿದ್ಧತೆ ಪರಿಶೀಲಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ ಮೂರು ದಿನಗಳ ಕಾಲ ಪಟ್ಟಣದಲ್ಲಿ ಅದ್ಧೂರಿಯಾಗಿ ಪುನೀತೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಾಳೆ ಸಂಜೆ 5.30ಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಬಾಲಕಿಯರ ಪ್ರೌಢಶಾಲೆ ಹಾಗೂ ಕಾಲೇಜಿನ ಒಂದು ಸಾವಿರ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದರು.
ಮೊದಲ ದಿನ ನ.25 ರಂದು ಹೆಸರಾಂತ ಗಾಯಕಿ ಅನನ್ಯ ಭಟ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಹಾಗೂ ಕಿರುತೆರೆ ಕಲಾವಿದರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ತಮ್ಮ ಪ್ರಬುದ್ಧ ಮಾತಿನ ಮೂಲಕ ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಡಿಸಿರುವ, ಮೂಲತಃ ಪಾಂಡವಪುರ ತಾಲ್ಲೂಕಿನವರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ.ಎಂ.ಕೃಷ್ಣೇಗೌಡ ಅವರನ್ನು ಇದೇ ವೇದಿಕೆಯಲ್ಲಿ ಅದ್ಧೂರಿಯಾಗಿ ಸನ್ಮಾನಿಸುವ ಮೂಲಕ ತವರಿನ ಗೌರವ ನೀಡಲಾಗುತ್ತದೆ. ಅಲ್ಲದೇ ಖ್ಯಾತ ನಟಿಯರಾದ ಶ್ವೇತಾ ಪ್ರಸಾದ್, ಸೋನುಗೌಡ, ಪ್ರಿಯಾಂಕ, ನಮ್ರತಾ ಗೌಡ ಅವರಿಂದ ನೃತ್ಯ ಪ್ರದರ್ಶನ, ಚೇತನ ಹರಿ ಮತ್ತು ತಂಡದಿಂದ ಕಥಕ್ ನೃತ್ಯ ಪ್ರದರ್ಶನ, ಸಂತೋಷ್ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ ಇರುತ್ತದೆ ಎಂದು ವಿವರಿಸಿದರು.
ನ.26ಕ್ಕೆ ಐಶ್ವರ್ಯ ಅನಂತ ಕಾರ್ತಿಕ್ ಅವರಿಂದ ಕಥಕ್ ನೃತ್ಯ, ನಯನ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ, ರುದ್ರ ಮತ್ತು ತಂಡದಿಂದ ಜೈ ಭಜರಂಗಿ ನೃತ್ಯ ಪ್ರದರ್ಶನ ಮತ್ತು ವಿಶೇಷವಾಗಿ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಇರುತ್ತದೆ. ಜತೆಗೆ ನಟಿಯರಾದ ಶುಭಾಪೂಂಜಾ, ಗೌತಮಿ, ರಜನಿ ಮತ್ತು ಭವ್ಯ ಗೌಡ ಅವರಿಂದ ನೃತ್ಯ ಪ್ರದರ್ಶನ ಇರುತ್ತದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಪಮ ಭಟ್ ಮಾಡಲಿದ್ದಾರೆ.
ನ.27 ಕ್ಕೆ ಜಂಬೆ ಅವರಿಂದ ಚಿತ್ರಕಲಾ ಪ್ರದರ್ಶನ, ಜಗ್ಗಪ್ಪ ಮತ್ತು ತಂಡದಿಂದ ಹಾಸ್ಯ ಪ್ರದರ್ಶನ, ರುದ್ರ ಮತ್ತು ತಂಡದಿಂದ ಅಪ್ಪು ನಮನ ಕುರಿತಂತೆ ನೃತ್ಯ ಪ್ರದರ್ಶನ, ನಟಿಯರಾದ ವೈಷ್ಣವಿಗೌಡ, ಶಮಿತಾಗೌಡ ಅವರಿಂದ ನೃತ್ಯ ಪ್ರದರ್ಶನ, ವಿಶೇಷವಾಗಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ. ಜತೆಗೆ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಡಾ.ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಹಾಜರಿರುತ್ತಾರೆ. ಹೆಸರಾಂತ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ವೇದ ಚಿತ್ರದ ಆಡಿಯೋ ಬಿಡುಗಡೆ : ಪಟ್ಟಣದಲ್ಲಿ ನಡೆಯುತ್ತಿರುವ ಪುನೀತೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ನ.27 ರಂದು ಡಾ.ಶಿವರಾಜ್ ಕುಮಾರ್ ಅಭಿನಯದ `ವೇದ’ ಚಿತ್ರದ ಆಡಿಯೋ ಬಿಡುಗಡೆ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹೆಸರಾಂತ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಯಾವುದೇ ಪಾಸ್, ಟಿಕೇಟ್ ಇರುವುದಿಲ್ಲ. ಉಚಿತ ಪ್ರವೇಶವಿದ್ದು, ಮೊದಲು ಬಂದವರಿಗೆ ಆದ್ಯತೆ ಎಂದು ಅವರು ಸ್ಪಷ್ಟನೆ ನೀಡಿದರು.
ಮೂರು ದಿನಗಳ ಕಾಲ ನಡೆಯುವ ಪುನೀತೋತ್ಸವ ಕಾರ್ಯಕ್ರಮದ ವೇದಿಕೆಯ ಸಂಪೂರ್ಣ ನಿರ್ವಹಣೆಯನ್ನು ಚಿತ್ರ ನಿರ್ದೇಶಕ ಎ.ಹರ್ಷ ಮತ್ತು ತಂಡದವರು ನಿರ್ವಹಿಸಿಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಅರ್ಚನಾಚಂದ್ರು, ತಾಲ್ಲೂಕು ಜೆಡಿಎಸ್ ಪ್ರಭಾರ ಅಧ್ಯಕ್ಷ ಎಸ್.ಎ.ಮಲ್ಲೇಶ್ ಪುರಸಭೆಯ ಎಲ್ಲ ಸದಸ್ಯರು ಇದ್ದರು.