ಬೆಂಗಳೂರು: 205 ಕೆಜಿ ಈರುಳ್ಳಿ ಮಾರಾಟ ಮಾಡಿ ಬರಿ 8ರೂ. ತೆಗೆದುಕೊಂಡು ಹೋದ ಗದಗ ರೈತನ ಗೋಳು ಕೇಳೋರಾರು..!?
ಬೆಂಗಳೂರು: ಉತ್ತರ ಕರ್ನಾಟಕದ ರೈತರೊಬ್ಬರು ಗದಗ ಜಿಲ್ಲೆಯಿಂದ ಬೆಂಗಳೂರಿಗೆ 415 ಕಿಲೋಮೀಟರ್ ಪ್ರಯಾಣಿಸಿ, 205 ಕೆಜಿ ಈರುಳ್ಳಿ ತಂದು ಮಾರಾಟ ಮಾಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಕೇವಲ 8.36 ರೂ. ಕೈಗೆ ಸಿಕ್ಕಿದೆ. ಈ 8 ರೂಪಾಯಿ ತೆಗೆದುಕೊಂಡು ರೈತ ತನ್ನೂರಿಗೆ ಪ್ರಯಾಣ ಬೆಳಸಿದ್ದಾರೆ. ತನಗಾದ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈರುಳ್ಳಿ ಬೆಲೆಯು ಬೆಂಗಳೂರಿನಲ್ಲಿ ಕ್ವಿಂಟಲ್‌ಗೆ 500 ಎಂದು ಹೇಳಲಾಗಿತ್ತು. 415 ಕಿಲೋ ಮೀಟರ್‌ನಿಂದ 205 ಕಿಲೋಗ್ರಾಂ ಈರುಳ್ಳಿ ತಂದು ಮಾರಾಟಮಾಡಿದ್ದಾರೆ.
ವಹಿವಾಟಿನ ರಸೀದಿ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ಈರುಳ್ಳಿ ತಂದ ರೈತ ಪವಾಡೆಪ್ಪ ಹಳ್ಳಿಕೇರಿ ಎಂಬುವರು. ಇವರು ತಿಳಿಸಿರುವಂತೆ ಈರುಳ್ಳಿ ಖರೀದಿಸುವ ಸಗಟು ವ್ಯಾಪಾರಿ ಪ್ರತಿ ಕ್ವಿಂಟಲ್‌ಗೆ ಕೇವಲ 200 ರೂ. ದರದಲ್ಲಿ ತೆಗೆದುಕೊಂಡಿದ್ದಾರೆ.
ಸರಕು ಸಾಗಣೆ ಶುಲ್ಕಕ್ಕೆ 377 ರೂ. ಮತ್ತು ಹಮಾಲಿ ಶುಲ್ಕಕ್ಕೆ 24 ರೂ. ಕಡಿತಗೊಳಿಸಿ ಒಟ್ಟು 8.36 ರೂ. ಲಾಭ ಬಂದಿದೆ. ಇದರಿಂದ ಮನನೊಂದ ರೈತ ಅಂತರ್ಜಾಲದಲ್ಲಿ ತನ್ನ ಸಂಕಟವನ್ನು ಹಂಚಿಕೊಂಡಿದ್ದು, ಕರ್ನಾಟಕದ ರಾಜಧಾನಿಯಲ್ಲಿ ಬೆಳೆಯನ್ನು ಮಾರಾಟ ಮಾಡದಂತೆ ಇತರ ರೈತರಿಗೆ ಎಚ್ಚರಿಕೆಯ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ರೈತನ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಒಬ್ಬರು, “ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರವು ರೈತರ (ಅದಾನಿ) ಆದಾಯವನ್ನು ದ್ವಿಗುಣಗೊಳಿಸುವುದು ಹೀಗೆ ಎಂದು ವ್ಯಂಗ್ಯವಾಡಿದ್ದಾರೆ.
ಗದಗ ರೈತ ಈರುಳ್ಳಿ ಮಾರಲು ಬೆಂಗಳೂರಿಗೆ 415 ಕಿ.ಮೀ ಪ್ರಯಾಣಿಸಿದಾಗ 205 ಕೆಜಿಗೆ 8.36 ಲಾಭ ಸಿಗುತ್ತದೆ” ಎಂದು ಬರೆದಿದ್ದಾರೆ.
ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಈಗ ತಮ್ಮ ಇಳುವರಿಗೆ ಎಂಎಸ್ಪಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಗದಗದಲ್ಲೂ ಈ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಗದಗದಲ್ಲಿ ಸಿಗುತ್ತಿರುವ ಬೆಲೆಯಿಂದ ಮನನೊಂದ ಪವಾಡೆಪ್ಪ ಅವರು 25 ಸಾವಿರ ರೂ.ಗಳಿಗೂ ಹೆಚ್ಚು ಖರ್ಚು ಮಾಡಿ ಬೆಳೆದ ಬೆಳೆಯನ್ನು ರಾಜ್ಯ ರಾಜಧಾನಿಗೆ ಸಾಗಿಸಿದ್ದರು. ಅಲ್ಲಿಯೂ ಸೂಕ್ತ ಬೆಲೆ ಸಿಗದೇ ತೀವ್ರ ನಷ್ಟ ಅನುಭವಿಸಿದ್ದಾರೆ.