ಪುತ್ತೂರು : ಅಂಗವಿಕಲ ವ್ಯಕ್ತಿಯೊಬ್ಬರಿಗೆ ಬಸ್‌ನಲ್ಲಿ ಸೀಟು ಬಿಟ್ಟುಕೊಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಯುವಕ ನಿರ್ವಾಹಕಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಪುತ್ತೂರಿನ ಬೊಳುವಾರಿನಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕಿ ವಿಜಯಾ ಎಂಬುವರೆ ಹಲ್ಲೆಗೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಸಂಬಂಧ ವಿಜಯಾ ಅವರು ನೀಡಿದ ದೂರಿನ ಆಧಾರದ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಪುತ್ತೂರಿನಿಂದ ಮಂಗಳೂರಿಗೆ ಇದೇ ಫೆ.20ರಂದು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ನಿಂತು ಪ್ರಯಾಣಿಸುತ್ತಿದ್ದರು. ಅದನ್ನು ಗಮನಿಸಿದ ನಿರ್ವಾಹಿಕಿ ವಿಜಯಾ ಅವರು ಯುವಕನ ಬಳಿ ಬಂದು ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಆತ ಆಕ್ಷೇಪಿಸಿದ್ದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಯುವಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಈ ವೇಳೆ ಹಲ್ಲೆಗೊಳಗಾದ ವಿಜಯಾ ಅವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ನಿರ್ವಾಹಕಿ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಕಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.