ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಇದೇ ಫೆ.21ರಂದು ಕೊಟ್ಟ ಏಳು ದಿನಗಳ ಗಡುವು ಮುಗಿದರೂ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ನಾಳೆಯಿಂದ (ಮಾರ್ಚ್ 1) ಎಲ್ಲ ಸರ್ಕಾರಿ ನೌಕರರು ಮತ್ತು ಅನುದಾನಿತ ಸಂಸ್ಥೆಗಳ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಜ್ಜಾಗಿರುವುದಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ವರ್ಷದ ಬಜೆಟ್ನಲ್ಲಿ 7ನೇ ವೇತನ ಆಯೋಗ ಹಾಗೂ ಒಪಿಎಸ್ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಫೆ.21ರಂದು ಸರ್ಕಾರಿ ನೌಕರರ ಸಂಘ ಸಭೆ ನಡೆಸಿ, ಅಂದು ಏಳು ದಿನಗಳಲ್ಲಿ 7ನೇ ವೇತನ ಆಯೋಗ ಹಾಗೂ ಹಳೆಯ ಪಿಂಚಿಣಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸುವ ಮೂಲಕ ಗಡುವ ನೀಡಿದ್ದರು. ಅಂದೇ ಒಂದು ವೇಳೆ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಿದ್ದರು.
ನೌಕರರ ಸಂಘ ಗಡುವು ನೀಡಿದ್ದ 7 ದಿನಗಳಲ್ಲಿ ಸರ್ಕಾರ ಬೇಡಿಕೆಗೆ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಯಾವ ಸೇವೆಗಳು ಲಭ್ಯ, ಅಲಭ್ಯ ಸಾಧ್ಯತೆ?: ಶಾಲಾ-ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಸಚಿವಾಲಯ ನೌಕರರ ಸಂಘ, ಅರಣ್ಯ ಇಲಾಖೆಯ ನೌಕರರು, ವಿವಿಧ ನಿಗಮ ಮಂಡಳಿಗಳ ನೌಕರರೂ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿನ ವಾಹನಗಳ ನೋಂದಣಿ, ಪರವಾನಗಿ ವಿತರಣೆ ಕಾರ್ಯಗಳೂ
ಸ್ಥಗಿತಗೊಳ್ಳಲಿವೆ.
ತುರ್ತು ಚಿಕಿತ್ಸೆ, ಸಾರಿಗೆ ಲಭ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳ ಆರೈಕೆಯ ಸೇವೆಗಳು ಎಂದಿನಂತೆ ಇರಲಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಮಾ.1ರಿಂದಲೇ ನಡೆಸಲಿದ್ದಾರೆ. ಆದರೂ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ವಿಶ್ವವಿದ್ಯಾಲಯಗಳಲ್ಲಿ ನಿತ್ಯದಂತೆ ಪಾಠಗಳು ನಡೆಯಲಿವೆ.
ಕಸ ಸಂಗ್ರಹಣೆಯಲ್ಲೂ ವ್ಯತ್ಯಯ: ಗ್ರಾಮ ಪಂಚಾಯಿತಿ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಂ ಪೌರ ಕಾರ್ಮಿಕರೂ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ರಾಜ್ಯದ ನಗರ, ಗ್ರಾಮಗಳಲ್ಲಿ ಕಸ ಸಂಗ್ರಹಣೆ, ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
ಶಾಲಾ, ಕಾಲೇಜುಗಳು ಬಂದ್: ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕೆಲಸಕ್ಕೆ ಗೈರುಹಾಜರಾಗುತ್ತಿದ್ದಾರೆ. ಹಾಗಾಗಿ, ಪ್ರಾಥಮಿಕ ಶಾಲೆಗಳಿಂದ ಪದವಿ ಕಾಲೇಜುಗಳವರೆಗೂ ತರಗತಿಗಳು ನಡೆಯುವುದಿಲ್ಲ. ಮಾರ್ಚ್ 1ರ ಬಳಿಕ ನಡೆಯಬೇಕಿದ್ದ ಶಾಲಾ, ಕಾಲೇಜು ಹಂತದ ಎಲ್ಲ ಪರೀಕ್ಷೆಗಳನ್ನೂ ಮುಂದೂಡುವ ಸಂಭವ ಇದೆ.
ಹೊರ ರೋಗಿಗಳ ಸೇವೆ ಅಲಭ್ಯ: ಒಳರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ವಿಭಾಗ (ಒಪಿಡಿ) ಸಂಪೂರ್ಣ ಬಂದ್ ಆಗಲಿವೆ. ಐಸಿಯು ಮತ್ತಿತರ ತುರ್ತುಚಿಕಿತ್ಸಾ ಘಟಕಗಳ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವರು.
ಆಸ್ತಿ ನೋಂದಣಿಯೂ ಸ್ಥಗಿತ: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ಸಾಕಷ್ಟು ವರಮಾನ ಖೋತಾ ಆಗುವ ಸಾಧ್ಯತೆ ಇದೆ.
ತಹಸೀಲ್ದಾರ್ ಕಚೇರಿಗಳೂ ಬಣಬಣ: ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿಯ ಸೇವೆಗಳು ಜನರಿಗೆ ದೊರಕುವುದಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರಗಳ ಸೇವೆ ಸೇರಿದಂತೆ ಕಂದಾಯ ಇಲಾಖೆಯ ಬಹುತೇಕ ಸೇವೆಗಳು ಸ್ಥಗಿತವಾಗಲಿವೆ.
ಅಹವಾಲು ಸಲ್ಲಿಕೆಗೆ ಇಂದು ಕೊನೆದಿನ: ಏಳನೇ ವೇತನ ಆಯೋಗ ಈಚೆಗೆ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು, ಇಲಾಖೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಅಹವಾಲು ಸಲ್ಲಿಕೆಯ ಅವಧಿ ಇದೇ 28ಕ್ಕೆ ಕೊನೆಗೊಳ್ಳಲಿದೆ. ಮರು ದಿನದಿಂದಲೇ ನೌಕರರ ಮುಷ್ಕರ ಆರಂಭವಾಗುತ್ತಿದೆ.
ಘೋಷಣೆ, ಪ್ರತಿಭಟನೆಗಳಿಗೆ ತಡೆ: ಮುಷ್ಕರದ ಸಮಯದಲ್ಲಿ ನೌಕರರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಧರಣಿ ನಡೆಸುವುದು, ಸರ್ಕಾರದ ವಿರುದ್ಧ ಯಾವುದೇ ಘೋಷಣೆ ಮಾಡುವಂತಿಲ್ಲ ಎಂದು ನೌಕರರ ಸಂಘ ನಿರ್ಬಂಧ ವಿಧಿಸಿದೆ.
ಕೆಲಸಕ್ಕೆ ಗೈರುಹಾಜರಾಗುವ ಮೂಲಕ ಶಾಂತಿಯುತವಾಗಿ ಮುಷ್ಕರ ನಡೆಸಬೇಕು. ಸಂಘ ನಿಗದಿಪಡಿಸಿದ ಮಾಹಿತಿ ಒಳಗೊಂಡ ಪೋಸ್ಟರ್‌ಗಳನ್ನು ಮಾತ್ರ ಪ್ರಚುರಪಡಿಸಲು ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದಾರೆ.