ನ್ಯೂಡೆಲ್ಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಲ್ಲಿ ಗಂಟಲು ನೋವು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ್ವರ ಮತ್ತು ಗಂಟಲು ನೋವು ಇರುವುದರಿಂದ ಸಿಎಂ ಕೇಜ್ರಿವಾಲ್ ಸ್ವಯಂ ಹೋಂ ಕ್ವಾರಂಟೈನ್‌ನಲ್ಲಿ ಇರಲು ನಿರ್ಧರಿಸಿದ್ದಾರೆ.
ಕೇಜ್ರಿವಾಲ್ ಅವರಿಗೆ ಡಯಾಬಿಟಿಸ್ ಕೂಡ ಇದೇ. ಭಾನುವಾರ ಮಧ್ಯಾಹ್ನದವರೆಗೆ ಗಂಟಲು ನೋವು ಮತ್ತು ಜ್ವರ ಇತ್ತು. ಇಂದು ಸ್ವಲ್ಪ ಹೆಚ್ಚಾಗಿರುವ ಕಾರಣ ಮಂಗಳವಾರ ಬೆಳಗ್ಗೆ ಕೋವಿ-19 ಪರೀಕ್ಷೆ ನಡೆಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಸಿಎಂ ಕಚೇರಿಯ ಮೂಲಗಳಿಂದ ತಿಳಿದು ಬಂದಿದೆ.
ಭಾನುವಾರ ಬೆಳಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅವರು ಭಾಗಿಯಾಗಿದ್ದನ್ನು ಹೊರತುಪಡಿಸಿದರೆ ನಂತರ ಯಾವುದೇ ಸಭೆಯಲ್ಲೂ ಭಾಗಿಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಕೇಜ್ರಿವಾಲ್ ಅವರು ವಿಡಿಯೋ ಸಂವಾದದ ಮೂಲಕ ಮಾತ್ರ ಸಭೆಯನ್ನು ನಡೆಸುತ್ತಿದ್ದಾರೆ.