ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆ ಪರಿಹಾರ ಸಂಬಂಧ ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ KSRTC ಕಾರ್ಮಿಕ ಸಂಘಟನೆಯ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯೊಂದಿಗೆ ಡಿ.2ರಂದು ನೌಕರರ ಕುಂದುಕೊರತೆ ಸಭೆ ನಡೆಯಲಿದೆ.
ಈ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳ ಸಭೆಯನ್ನು ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತಿದ್ದು, ನೌಕರರ ಸಮಸ್ಯೆಗೆ ಸಂಬಂಧಿಸಿದಂತೆ ಸಲಹೆ ಸೂಚನೆ ಕೊಡಬೇಕು ಎಂದು ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ನಿಗಮದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸಭೆ ಆಯೋಜಿಸಿದ್ದು ಪ್ರತಿ ಸಂಘಟನೆಯಿಂದ ಇಬ್ಬರು ಪದಾಧಿಕಾರಿಗಳಂತೆ ಹಾಜರಾಬೇಕು ಎಂದು ತಿಳಿಸಿದ್ದಾರೆ.
ಡಿಸೆಂಬರ್ 2ರ ಶುಕ್ರವಾರ ನಡೆಯುವ ಸಭೆಯಲ್ಲಿ ಪ್ರಮುಖವಾಗಿ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳಿಂದ ವೇತನ, ನೌಕರರ ಸಮಸ್ಯೆ ಕುರಿತು ಸಲಹೆ ಸೂಚನೆಗಳನ್ನು ಪಡೆಯುವುದು ಸೇರಿದಂತೆ ಮುಷ್ಕರದ ವೇಳೆ ಆಗಿರುವ ಪೊಲೀಸ್ ಪ್ರಕರಣಗಳು, ನೌಕರರು ಅನುಭವಿಸುತ್ತಿರುವ ಮಾನಸಿಕ ಕಿರಿಕಿರಿ ತಪ್ಪಿಸಲು ಯಾವ ರೀತಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.