ಬೆಂಗಳೂರು: ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ಕಳೆದ ಹಲವು ದಿವಸಗಳಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮಗಳನ್ನು ತನ್ನ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸುತ್ತ ಬಂದಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ.
ಇದೇ ತಿಂಗಳ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪುತ್ಥಳಿಯನ್ನು ಉದ್ಘಾಟಿಸುವ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನಾರ್ಹ ಸಂಗತಿ. ಈ ರೀತಿಯ ಬೆಳವಣಿಗೆಯನ್ನು ಆಮ್ ಆದ್ಮಿ ಪಕ್ಷವು ಯಾವುದೇ ರೀತಿಯಲ್ಲೂ ಸಹಿಸುವುದಿಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಬಿಜೆಪಿ ಪಕ್ಷವು ದೇವನಹಳ್ಳಿ ಸಮೀಪದಲ್ಲಿ ರೈತರಿಂದ ಭೂಸ್ವಾಧೀನಪಡಿಸಿಕೊಂಡ ಕೆ ಎಸ್ ಎಫ್ ಐ ಡಿ ಸಿ ವಶದಲ್ಲಿರುವ 400 ಎಕರೆ ಜಮೀನಿನಲ್ಲಿ ಪಕ್ಷದ ಬೃಹತ್ ಸಮಾವೇಶವನ್ನು ಆಯೋಜಿಸಿ ತನ್ನೆಲ್ಲ ಪಕ್ಷದ ಕಾರ್ಯಕರ್ತರುಗಳನ್ನು ಕರೆತಂದು ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ಸಮ್ಮೇಳನವಾಗಿ ಪರಿವರ್ತಿಸುತ್ತಿದೆ.
ಈ ರೀತಿಯ ಸರ್ಕಾರಿ ಕಾರ್ಯ ಕ್ರಮ ಗಳನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಚುನಾವಣಾ ಭಾಷಣಗಳನ್ನು ಮಾಡಿಸಲೆಂದೇ ಪ್ರಧಾನಿಗಳನ್ನು ಆಹ್ವಾನಿಸುತ್ತಿರುವುದು ಇವರ ಮುಂಬರುವ ಚುನಾವಣೆಯಲ್ಲಿ ಸೋಲುತ್ತೇವೆಂಬ ಹತಾಶೆಯ ಸಂಕೇತ.
ಇದಲ್ಲದೆ ಸರ್ಕಾರವು ವಿರೋಧ ಪಕ್ಷಗಳನ್ನು ಆಹ್ವಾನಿಸುತ್ತಿಲ್ಲ ಹಾಗೂ ಆಮ್ ಆದ್ಮಿ ಪಕ್ಷಕ್ಕೂ ಸಹ ಇದುವರೆವಿಗೂ ಯಾವುದೇ ಅಧಿಕೃತ ಆಹ್ವಾನ ಪತ್ರಿಕೆಯೂ ಬಂದಿಲ್ಲ ಎಂದು ಮೋಹನ್ ದಾಸರಿ ಅಲವತ್ತುಕೊಂಡಿದ್ದಾರೆ.
ಆಡಳಿತ ಬಿಜೆಪಿ ಪಕ್ಷವು ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ರಾಜ್ಯದ ಮಕ್ಕಳಿಗೆ ವಿಷಬೀಜವನ್ನು ಬಿತ್ತಿ ಅಭ್ಯಸಿಸುತ್ತಿರುವ ಈ ಹಂತದಲ್ಲಿ ಈ ರೀತಿಯ ಬೆಳವಣಿಗೆ ತೀರಾ ಅಸಹ್ಯಕಾರಿ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ಕ್ರಮವನ್ನು ಆಮ್ ಆದ್ಮಿ ಪಕ್ಷವು ಖಂಡಿಸುತ್ತ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಸರಕಾರವನ್ನು ಆಗ್ರಹಿಸುತ್ತದೆ ಎಂದು ಮೋಹನ್ ದಾಸರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.