ಬೆಂಗಳೂರು: ಬಾರ್‌ನಲ್ಲಿ ಮದ್ಯಕೊಡಲು ತಡಮಾಡಿದ್ದ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಆಸ್ಪತ್ರೆಗೆ ದಾಖಲಾಗಿದ್ದ ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ ಚಿಕತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಕುಮಾರಸ್ವಾಮಿ ಬಡಾವಣೆಯ ಪೊಲೀಸ್ ಠಾಣೆಗೆ ಅನತಿ ದೂರದಲ್ಲಿರುವ ಎಸ್‍ಆರ್‌ಆರ್ ಬಾರ್‌ನಲ್ಲಿ ಕಳೆದ ಜನವರಿ 22ರಂದು ಹಲ್ಲೆಗೊಳಗಾಗಿದ್ದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಎಂಬಾತನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದವನು.
ಸುರೇಶ್ ಹಾಗೂ ವಿನೋದ್ ಎಂಬುವರು ಕುಡಿದ ಅಮಲಿನಲ್ಲಿ ಬಸವರಾಜನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು. ಜ.22ರಿಂದ ಸಾವಿನ ಜತೆ ಹೋರಾಟ ನಡೆಸುತ್ತಿದ್ದ ಬಸವರಾಜು ಗುರುವಾರ ಅಸುನೀಗಿದ್ದಾರೆ.
ಘಟನೆ ವಿವರ: ಸುರೇಶ್ ಹಾಗೂ ವಿನೋದ್ ಇಬ್ಬರೂ ಪದವೀಧರರು. ಎಲೆಕ್ಟ್ರಾನಿಕ್‍ಗೆ ಸಂಬಂಧಿಸಿದ ಕೆಲಸ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು 22 ರರಂದು ಸಂಜೆ ಈ ಇಬ್ಬರು ಎಸ್‍ಆರ್‌ಆರ್ ಬಾರ್‌ಗೆ ಬಂದಿದ್ದಾರೆ. ಈ ವೇಳೆ ಬಸವರಾಜ, ಇವರಿಗೆ ವೈನ್ ಕೊಡಲು ತಡವಾಗಿದೆ. ಇದರಿಂದ ಬೇಸತ್ತು ಸುರೇಶ್ ಹಾಗೂ ವಿನೋದ್ ಅಲ್ಲಿಂದ ಏನು ಹೇಳದೆ ತೆರಳಿದ್ದರು. ಅಷ್ಟಾಗಿದ್ದರೆ ಮುಗೀತಿತ್ತೆನೋ.
ಆದರೆ ಅದೇ ದಿನ ರಾತ್ರಿ 10.30ರ ವೇಳೆಗೆ ಕಂಠಪಟ್ಟ ಕುಡಿದ್ದ ಈ ಇಬ್ಬರು ಎಸ್‍ಆರ್‌ಆರ್ ಬಾರ್‌ಗೆ ಬಂದಿದ್ದಾರೆ. ಬಾರ್ ಕ್ಲೋಸ್ ಆಗಿದ್ದ ಕಾರಣ ಎಲ್ಲರೂ ಕ್ಲೀನಿಂಗ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಬಸವರಾಜನ ಜತೆ ಸುರೇಶ್ ಹಾಗೂ ವಿನೋದ್ ಇಬ್ಬರೂ ಸೇರಿ ಕಿರಿಕ್ ಮಾಡಿದ್ದಾರೆ.
ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಇಬ್ಬರು ಆರೋಪಿಗಳು ಬಸವರಾಜನನ್ನ ತಳ್ಳಿದ್ದಾರೆ. ಈ ವೇಳೆ ಬಸವರಾಜನ ತಲೆ ಗೋಡೆಗೆ ಹೊಡೆದು ಕಿವಿ ಭಾಗದಲ್ಲಿ ರಕ್ತ ಬಂದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಅಂದು ರಾತ್ರಿಯೇ ಕರೆದೊಯ್ದು ಡ್ರೆಸ್ಸಿಂಗ್ ಮಾಡಿಸಲಾಗಿತ್ತು.
ಬಳಿಕ ಈ ಗಾಯ ಸಣ್ಣದು ಎಂದು ಬಸವರಾಜ ಆಸ್ಪತ್ರೆಗೂ ದಾಖಲಾಗದೆ ವಾಪಸ್ ಬಂದಿದ್ದ. ಮಾರನೇ ದಿನ ಸುರೇಶ್ ಹಾಗೂ ವಿನೋದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದ. ಸ್ವಲ್ಪ ಸಮಯದ ಬಳಿಕ ತಲೆ ತಿರುಗಿ ಕುಸಿದು ಬಿದ್ದ ಬಸವರಾಜನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆಸ್ಪತ್ರೆಗೆ ದಾಖಲಾದ ಬಸವರಾಜನನ್ನು ತಪಾಸಣೆ ಮಾಡಿದ ವೈದ್ಯರು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಬಸವರಾಜ ಕೋಮಾಗೆ ಜಾರಿದ್ದ. ಬಳಿಕ ಆತ ಯಾವುದೇ ಚಿಕಿತ್ಸೆಗೂ ಸ್ಪಂದನೆ ಮಾಡ್ತಿರಲಿಲ್ಲ ಹೀಗೆ ಕೋಮಾಗೆ ಜಾರಿದ್ದ ಬಸವರಾಜ 23 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಮೊದಲು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಸವರಾಜ ಮೃತಪಟ್ಟಿರುವುದರಿಂದ ಈಗ ಕೊಲೆ ಕೇಸನ್ನಾಗಿ ಪರಿವರ್ತಿಸುವ ಸಾಧ್ಯತ ಇದೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.