ಉಜ್ವಲ ಭವಿಷ್ಯಕ್ಕೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ: ಡಾ.ಮಹದೇವಸ್ವಾಮಿ ಅಭಿಮತ
ಪಿರಿಯಾಪಟ್ಟಣ: ಯುವಜನತೆ ಹಾಗೂ ಮಹಿಳೆಯರು ತಮ್ಮ ಉಜ್ವಲ ಭವಿಷ್ಯ ಹಾಗೂ ಉದ್ಯೋಗಕ್ಕಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದುವುದು ಅತ್ಯಗತ್ಯ ಎಂದು ಡಾ.ಮಹದೇವಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಡಾ.ಮಹದೇವ ಸ್ವಾಮಿ ಸೇವಾ ಬಳಗದ ವತಿಯಿಂದ ಆಯೋಜಿಸಿದ್ದ ಉಚಿತ ಸ್ಪೋಕನ್ ಇಂಗ್ಲಿಷ್ ಹಾಗೂ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಅಕ್ಷರ ಜ್ಞಾನವಿಲ್ಲದವರನ್ನು ಅನಕ್ಷರಸ್ಥರು ಎಂದು ಹೇಳಲಾಗುತ್ತಿತ್ತು. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದವರನ್ನು ಅನಕ್ಷರಸ್ಥರಂತೆ ನೋಡುವಷ್ಟರ ಮಟ್ಟಿಗೆ ಸಾಮಾಜ ಬದಲಾಗಿದ್ದು, ಮನುಷ್ಯನ ಜೀವನ ಅವಿಭಾಜ್ಯ ಅಂಗವಾಗಿ ಕಂಪ್ಯೂಟರ್ ಪರಿಗಣಿಸಲ್ಪಟ್ಟಿದೆ. ಹೀಗಾಗಿ ಇಂದಿನ ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ ಎಂದರು.
ಇನ್ನು ಪ್ರತಿಯೊಬ್ಬರೂ ಕಂಪ್ಯೂಟರ್ ಕಲಿಯಬೇಕು. ಇಂದು ಹೊಟೆಲ್, ಶಾಪಿಂಗ್ ಮಾಲ್, ಗಾರ್ಮೆಂಟ್ಸ್ ನಲ್ಲಿ ಮಹಿಳೆಯರು ಉದ್ಯೋಗ ಅರಸಿ ಹೋದರೆ ಅವರಿಗೆ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಉದ್ಯೋಗ ನೀಡುವುದಿಲ್ಲ. ಆದ್ದರಿಂದ ಎಲ್ಲರೂ ಕಂಪ್ಯೂಟರ್ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಸಹ ವಿದ್ಯಾರ್ಥಿ ದಿಸೆಯಿಂದಲೇ ಅಂತರ್ಜಾಲ ದಲ್ಲಿರುವ ಉತ್ತಮ ವಿಷಯಗಳನ್ನು ಅರಿತುಕೊಂಡು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಅಂತರ್ಜಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ.
ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಮಾಹಿತಿ ತಂತ್ರ ಜ್ಞಾನದ ಶಿಕ್ಷಣ ಅವಶ್ಯ ಇದ್ದು, ವಿದ್ಯಾರ್ಥಿಗಳ ಭೌತಿಕ ವಿಕಾಸಕ್ಕೆ ಕಂಪ್ಯೂಟರ್ ಜ್ಞಾನ ಅವಶ್ಯ ವಿದ್ದು, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂದರು.
ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ಪಟ್ಟಣಕ್ಕೆ ಬರುವ ಬಡಜನತೆ ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ ರೂ. 5 ತಿಂಡಿ ಹಾಗೂ ರೂ.10 ಊಟ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಉಚಿತ ಟೈಲರಿಂಗ್ ತರಬೇತಿ, ವಾಹನ ಚಾಲನಾ ತರಬೇತಿ ನೀಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಸೇವಕ ಶಿವಣ್ಣ, ಮುಖಂಡರಾದ ಸಂಜೀವ್, ಸ್ಟೂಡಿಯೋ ಮಂಜು, ರಾಮಕೃಷ್ಣ ರಾವ್, ಇರ್ಷಾದ್, ಮಹೇಂದ್ರ, ಶಶಿಕುಮಾರ್, ಮಹದೇವ್, ಪ್ರದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.