ಬೆಳಗಾವಿ: ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಲಿಖಿತ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿ ನೌಕರರ ಕೂಟ ಕಳೆದ ಅ.10ರಿಂದ ಹಮ್ಮಿಕೊಂಡಿರುವ ಬೃಹತ್ ಸೈಕಲ್ ಜಾಥಾ 27ನೇ ದಿನವಾದ ಇಂದು ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿತು.
ಬಳ್ಳಾರಿಯಿಂದ ಆರಂಭವಾಗಿರುವ ಸೈಕಲ್ ಜಾಥಾ ಇಂದಿಗೆ ರಾಜ್ಯದ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ನೌಕರರ ಸಮಸ್ಯೆ ಮತ್ತು ವೇತನ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದೆ.
ಅದೇ ರೀತಿ ಇಂದು (ನ.5) ಸಾರಿಗೆ ನೌಕರರ ಸೈಕಲ್ ಜಾಥಾ ನೂರಾರು ನೌಕರರೊಂದಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಆರ್‌ಟಿಒ – ಚೆನ್ನಮ್ಮ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮೂಲಕ ತಲುಪಿ ಮನವಿ ಸಲ್ಲಿಸಿತು.
ಈ ವೇಳೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ, ಪದಾಧಿಕಾರಿಗಳಾದ ಸಂತೋಷ್, ಕೃಷ್ಣಾ ಸೇರಿದಂತೆ ನೂರಾರು ನೌಕರರು ಹಾಗೂ ಬೆಳಗಾವಿ ವಿಭಾಗದ ನೌಕರರ ಕೂಟದ ಗೌರವ ಅಧ್ಯಕ್ಷ ಮಹೇಶ್ ಸಿಗಿಹಳ್ಳಿ, ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಪವನಸಿಂಗ್ ಹಜೇರಿ, ಖಜಾಂಚಿ ಶಶಿಕಾಂತ ಪಾಟೀಲ, ಬಸವರಾಜ್ ತೇರದಾಳ, ಕುಪೇಂದ್ರ, ಲಕ್ಕಪ್ಪ.
ಚಿಕ್ಕೋಡಿ ವಿಭಾಗದ ಅಧ್ಯಕ್ಷ ಸಂಜೀವ ಜೋಗೋಜಿ, ಗೌರವ ಅಧ್ಯಕ್ಷ ರಾಜು ಸನಧಿ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಸಾಲ್ವೆ, ಕಪರೆಟ್ಟಿ, ಪದಾಧಿಕಾರಿಗಳು ಹಾಗೂ ನೌಕರರ ಕೂಟದ ಅಭಿಮಾನಿಗಳು ಮತ್ತು ಮಹಿಳಾ ಮುಖಂಡರಾದ ಸಾವಿತ್ರಿ, ಕಮಲಾಕ್ಷಿ, ಸುಮಂಗಲಾ ಇನ್ನು ಅನೇಕ ಮಹಿಳಾ ಮುಖಂಡರು ನೌಕರರ ಕುಟುಂಬದವರು ಭಾಗವಹಿಸಿದ್ದರು.
ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ಮೂಲಕ ಸೈಕಲ್ ಜಾಥಾ ತೆರಳಿ ಮನವಿ ಸಲ್ಲಿಸಿದ ಬಳಿಕ ಕಿತ್ತೂರಿಗೆ ತೆರಳಿದು ಬಳಿಕ ರಾತ್ರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ರಾತ್ರಿ ಸುಮಾರು 8.30ರಲ್ಲಿ ಮತ್ತೆ ಜಾಥಾ ಆರಂಭಿಸಿದ್ದು ಧಾರವಾಡ ತಲುಪಲಿದೆ. ಧಾರವಾಡದಲ್ಲೇ ರಾತ್ರಿ ವಾಸ್ತವ್ಯ ಹೂಡಲಿದೆ.