ಮೈಸೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ 6 ದಿನಗಳಿಂದಲೂ ಕಬ್ಬು ಬೆಳೆಗಾರ ರೈತರು ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿಲ್ಲ ಇವರು ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬಂದ ಮೇಲೆ ರೈತರ ಕುಂದು ಕೊರತೆಗಳ ಸಭೆಯನ್ನೇ ಈವರೆಗೂ ಕರೆದಿಲ್ಲ.
ಕಳೆದ ನಾಲ್ಕು ತಿಂಗಳುಗಳಿಂದ ಕಬ್ಬು ಬೆಳೆಗಾರ ರೈತರು ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರೂ ಅದರ ಬಗ್ಗೆ ಯಾವುದೇ ಮಾತನಾಡಿಲ್ಲ. ಇದು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವಂತದ್ದಲ್ಲ ಇಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿಯಲು ಉಸ್ತುವಾರಿ ಸಚಿವರೇ ಕಾರಣರಾಗಿದ್ದಾರೆ.
ಕಬ್ಬು ಬೆಳೆಗಾರ ರೈತರು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಧರಣಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಧರಣಿ ನಿರತ ರೈತರು ಎಚ್ಚರಿಕೆ ನೀಡಿದ್ದಾರೆ.
ಕಬ್ಬಿನ ಎಫ್ ಆರ್ ಪಿ ಪುನರ್ ಪರಿಶೀಲನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ 6 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷಕ್ಕಿಂತ ಟನ್ ಕಬ್ಬಿಗೆ ಕೇವಲ ಐದು ರೂಪಾಯಿ ಏರಿಕೆ ಮಾಡಿದೆ. ಇನ್ನು ಕಟಾವ್ ಕೂಲಿ ಸಾಗಾಣಿಕೆ ವೆಚ್ಚವನ್ನು 150 ರೂ. ನಿಗದಿ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ರೈತರನ್ನು ಮರೆತಿರುವಂತೆ ಕಾಣುತ್ತಿದೆ ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದರು, ಆರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು, ಸೌಜನ್ಯಕ್ಕೂ ಮಾತನಾಡಿಸದೆ ಇರುವುದು, ಸರ್ವಾಧಿಕಾರಿ ಧೋರಣೆಯಾಗಿದೆ, ಇವರು ಉದ್ಯಮಿಗಳ, ರಿಯಲ್ ಎಸ್ಟೇಟ್ ಮಾಪಿಯಾದವರ. ಹಿತರಕ್ಷಣೆಗಾಗಿ ಆಡಳಿತ ನಡೆಸುವಂತೆ ಕಾಣುತ್ತಿದೆ ಎಂದು ಹೋರಾಟ ನಿರತರು ಕಿಡಿಕಾರಿದರು.
ಇವರು ಮಾಫಿಯಾ ಹಿತರಕ್ಷಣಾ ಸಚಿವರಾಗಿದ್ದಾರೆ, ರಾಜ್ಯ ಸರ್ಕಾರ ಕಬ್ಬು ದರ ನಿಗದಿಗೆ 10ನೇ ತಾರೀಖು ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ನಿಯಂತ್ರಣ ಮಂಡಳಿಯ ಸದಸ್ಯರು ಸಭೆ ಕರೆದಿದ್ದು ಕಬ್ಬು ಎಫ್ ಆರ್ ಪಿ ದರ ಏರಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರ ಗಮನಿಸಿ, ಕಬ್ಬು ಬೆಳೆಗಾರರ ಹೋರಾಟದ ತೀರ್ಮಾನ ಕೈಗೊಳ್ಳಲಾಗುವುದು, ಈಗಾಗಲೇ ಗುಲ್ಬರ್ಗ, ಬಿಜಾಪುರ, ಬೆಳಗಾವಿ, ಬಾಗಲಕೋಟೆ, ಹಳಿಯಾಳ, ಧಾರವಾಡ, ಗದಗ್ ಜಿಲ್ಲೆಗಳಲ್ಲಿ ನಿರಂತರ ಅಹೋರಾತ್ರಿ ಧರಣಿ ನಡೆಯುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರೈತರು ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಜಿಲ್ಲೆಯ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನ.8 ರಂದು ಸಭೆ ಕರೆದಿದ್ದು ಬಗರು ಹುಕುಂ ಸಾಗುವಳಿ ಪತ್ರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಧರಣಿ ನಿರತರು ರಸ್ತೆಯಲ್ಲಿ ಕುಳಿತು ಊಟ ಮಾಡಿದರು. ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಆದರೆ ಹಾಡ್ಯ ರವಿ, ಕುರುಬೂರ್ ಸಿದ್ದೇಶ್, ಪ್ರಸಾದ್ ನಾಯಕ್, ಹಿರಿಯೂರ್ ನವೀನ, ಗೌರಿಶಂಕರ್, ಗುರುಸ್ವಾಮಿ, ರಂಗರಾಜು, ಕಾಟೂರ್ ಮಾದೇಶ್ವಾಮಿ, ಮಹದೇವ, ಮಂಜುನಾಥ್, ಉಡಿಗಾಲ ಮಂಜು ಇನ್ನು ಮುಂತಾದವರು ಇದ್ದರು.