ಬೆಂಗಳೂರು: ಸಾರಿಗೆ ನೌಕರರು ನಿತ್ಯ ಅನುಭವಿಸುತ್ತಿರುವ ಒಂದಿಲ್ಲೊಂದು ಸಮಸ್ಯೆಗೆ ಪ್ರಮುಖವಾಗಿ ವೇತನ ತಾರತಮ್ಯತೆಯೇ ಕಾರಣವಾಗಿದೆ. ಹೀಗಾಗಿ ನಮ್ಮ ನೌಕರರಿಗೆ ಸರಿ ಸಮಾನ ವೇತನ ಮಾಡಿಬಿಡಿ ಇದರಿಂದ ಬಹುತೇಕ ಎಲ್ಲ ಸಮಸ್ಯಗಳಿಗೂ ಪರಿಹಾರ ಸಿಕ್ಕಂತಾಗುತ್ತದೆ ಎಂದು ಕೂಟದ ಪದಾಧಿಕಾರಿಗಳು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಹೌದು! ಶುಕ್ರವಾರ ಕರೆದಿದ್ದ ನೌಕರರ ಕುಂದುಕೊರತೆ ಸಭೆಯ ಆರಂಭದಲ್ಲೇ ಎಂಡಿ ಅವರು ವೇತನ ಸಂಬಂಧ ಇಲ್ಲಿ ಚರ್ಚೆ ಬೇಡ. ಇದು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿರುವುದು ಎಂದು ಪದಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ವೇಳೆ ಕೂಟದ ಪದಾಧಿಕಾರಿಗಳು ಆ ಬಗ್ಗೆ ನಾವು ಇಲ್ಲಿ ಚರ್ಚೆ ಮಾಡುವುದಿಲ್ಲ. ಆದರೆ ಮುಖ್ಯವಾಗಿ ನೌಕರರು ಸಮಸ್ಯೆ ಎದುರಿಸುತ್ತಿರುವುದು ಇದರಿಂದಲೇ ಆದ್ದರಿಂದ ತಾವು ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದು ಮನವರಿಕೆ ಮಾಡಿಕೊಡಬೇಕು ಮನವಿ ಮಾಡಿದ್ದಾರೆ.
ಆ ಬಳಿಕ ನೌಕರರ ಸಮಸ್ಯೆ ಪರಿಹಾರ ಸಂಬಂಧ ಚರ್ಚಿಸಲಾಗಿದೆ. ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವಾರು ಬಾರಿ ಮನವಿ ಕೊಟ್ಟಿದ್ದೇವೆ. ಅದೇ ಮನವಿಯನ್ನು ಮತ್ತೆ ಮತ್ತೆ ಕೊಡುತ್ತಿದ್ದೇವೆ ಆದರೆ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ ಎಂಬುವುದು ಪ್ರಮುಖವಾಗಿ ಚರ್ಚಾವಿಷಯವಾಯಿತು.
ಈ ವೇಳೆ ಎಂಡಿ ಅನ್ಬುಕುಮಾರ್ ಅವರು ಇದರ ಬಗ್ಗೆ ನಾವು ಕೂಡ ಕಾರ್ಯಪ್ರವೃತ್ತರಾಗುತ್ತಿದ್ದು ಅತೀ ಶೀಘ್ರದಲ್ಲೇ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂಬ ಭರವಸ ನೀಡಿದ್ದಾರೆ.
ಅಲ್ಲದೆ ಬಿಎಂಟಿಸಿಯಲ್ಲಿ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವ ವಿಷಯದಲ್ಲಿ ನಾವು ಏನನ್ನು ಹೇಳಲು ಬರುವುದಿಲ್ಲ. ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ ಅಂಥ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ನೀವು ಹೇಳುತ್ತಿರುವುದು ಸರಿ ಆದರೆ, ಇಂದು ನಡೆಯುತ್ತಿರುವ ಸಭೆ ಕೇವಲ ಕೆಎಸ್‌ಆರ್‌ಟಿಸಿ ನಿಗಮವೊಂದಕ್ಕೆ ಸಂಬಂಧಿಸಿದ್ದಲ್ಲ ನಾಲ್ಕೂ ನಿಗಮಗಳಿಗೂ ಸಂಬಂಧಿಸಿದ್ದು ಆದ್ದರಿಂದ ತಾವು ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಸಕರಾತ್ಮವಾಗಿ ಸ್ಪಂದಿಸಿದ ಎಂಡಿ ನಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವುದನ್ನು ಚರ್ಚಿಸಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡಲು ಮುಂದಾಗುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಪಟ್ಟಿ ಮಾಡಿ ಎಂಡಿ ಅವರಿಗೆ ಸಲ್ಲಿಸಿದ್ದು ಆ ಎಲ್ಲ ಸಮಸ್ಯೆಗಳ ಪರಿಹಾರ ಎಷ್ಟರ ಮಟ್ಟಿಗೆ ನೆರವೇರಿದೆ ಎಂಬುದರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.