ಕನಕಪುರ: ನಗರ ಶ್ರೀದೇಗುಲಮಠದಲ್ಲಿ ಕಡೆ ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷದೀಪೋತ್ಸದ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಠದ ಹಿರಿಯ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಜಿಗಳು ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಹಿಂದೂ ಧರ್ಮದಲ್ಲಿ ದೀಪಗಳಿಗೆ ವಿಶೇಷ ಮಹತ್ವವಿದೆ. ಭಗವಂತನ ಪ್ರೀತಿಗೆ ಪಾತ್ರರಾಗಬೇಕಾದರೆ, ಬೆಳಕಿನ ದೀಪಗಳನ್ನು ಹಚ್ಚುವ ಮೂಲಕ ದೇವರ ಸ್ಮರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ತಿಕ ಮಾಸದಂದು ದೇಗುಲಮಠದ ಕ್ಷೇತ್ರದಲ್ಲಿ ಪ್ರತಿವರ್ಷವೂ ಲಕ್ಷದೀಪೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಕ್ತರು ದೀಪಗಳನ್ನು ಬೆಳಗುವ ಮೂಲಕ ದೇವರ ಪ್ರಾರ್ಥನೆ ಮಾಡಿ ಅವನ ಕೃಪೆಗೆ ಪಾತ್ರರಾಗಬೇಕು ಎಂದರು.
ಜ್ಯೋತಿಯಲ್ಲಿ ಪರಶಿವನ ನೆಲೆ: ಕಿರಿಯ ಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಕ್ಷೇತ್ರದಲ್ಲಿ ದೀಪಾರಾಧನೆ ನಮ್ಮ ಸಂಪ್ರದಾಯ. ಪರಶಿವನು ಜ್ಯೋತಿಯಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಜ್ಯೋತಿ ಬೆಳಗುವುದರ ಮೂಲಕ ಸರ್ವರಿಗೂ ಸುಖ ಶಾಂತಿ, ಸಂಪತ್ತು ದೊರಕಲಿ ಎಂದರು.
ಮಠದ ಹೊರಾಂಗಣ ಮತ್ತು ಒಳಾಂಗಣವನ್ನು ಹೂವುಗಳಿಂದ ಆಲಂಕರಿಸಲಾಗಿತ್ತು, ಎಲ್ಲೆಲ್ಲೂ ಬಣ್ಣಬಣ್ಣಗಳಿಂದ ರಂಗೋಲಿಯಲ್ಲಿ ಬಿಡಿಸಿದ್ದ ಈಶ್ವರ, ಸರ್ಪ,ತ್ರಿಶೂಲ, ಗಣಪತಿಯ ಭಕ್ತರ ಗಮನ ಸೆಳೆಯಿತು ಸಾವಿರಾರು ಭಕ್ತರು ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿಭಾವ ಮೆರೆದರು.
ಭಕ್ತರಿಗಾಗಿ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಗಿತ್ತು. ತುಂತುರು ಮಳೆಯಲ್ಲಿ ಸಾವಿರಾರು ಜನರು ಎಂದಿನಂತೆ ಸಂಜೆ 6 ಗಂಟೆ ವೇಳೆಗೆ ದೇಗುಲಮಠದ ಆವರಣದಲ್ಲಿ ಜನಸಾಗರವೇ ಸೇರಿತ್ತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸುವುದೇ ಮಠದ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸಿತು. ನಾಲ್ಕು ಕಡೆಗಳಲ್ಲಿ ಪ್ರಸಾದ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.