ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗ ಒಂದಿಲ್ಲೊಂದು ಹಗರಣಕ್ಕೆ ಆಗಾಗೆ ಹೆಸರುವಾಸಿಯಾಗುತ್ತಲೇ ಇರುವ ವಿಭಾಗ ಎಂದು ಕರೆಸಿಕೊಳ್ಳುತ್ತಲೇ ಇರುತ್ತದೆ.
ಅದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು. ಅದರಲ್ಲಿ ನಿಗಮದ 60 ಲಕ್ಷ ರೂ. ಮತ್ತೊಂದರಲ್ಲಿ 7 ಲಕ್ಷ ರೂ. ಹಗರಣ. ಹೀಗೆ ಅನೇಕ ಬಾರಿ ಸಾರ್ವಜನಿಕರ ಹಣ ದುರುಪಯೋಗ ಪಡಿಸಿಕೊಂಡು ಗುಳುಂ ಮಾಡಿರುವುದು ಸೇರಿದಂತೆ ಹೀಗೆ ಹಲವಾರು ನಿದರ್ಶನಗಳು ಇವೆ.
ಇನ್ನು ಈ ವಿಷಯಗಳು ಅಧಿವೇಶನದಲ್ಲೂ ಸಹ ಚರ್ಚೆಗೆ ಬಂದು ಇತಿಹಾಸ ಪುಟ ಸೇರಿವೆ. ಈ ವಂಚನೆಗೆ ಕಾರಣೀಕರ್ತರು ಕೆಳಹಂತದ ಲೆಕ್ಕಪತ್ರ ಶಾಖೆಯ ಕೆಲಸಗಾರರು. ಇಂತಹ ದುರುಪಯೋಗ ಪ್ರಕರಣ ಬೆಳಕಿಗೆ ಬಂದು ತನಿಖೆ ಮಾಡಿ ದುರುಪಯೋಗ ಪಡಿಸಿಕೊಂಡ ಸಿಬ್ಬಂದಿಗಳನ್ನು ಶಿಕ್ಷಿಸುವುದು ನ್ಯಾಯ.
ಆದರೆ, ಇವರ ಜತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ, ಅಂದರೆ ಏನೂ ತಪ್ಪೇ ಮಾಡದ ಇತರ ಸಿಬ್ಬಂದಿಯನ್ನುಈ ಹಗರಣದಲ್ಲಿ ಸಿಲುಕಿಸಿ ಶಿಸ್ತು ಪ್ರಕರಣದಡಿ ಅಮಾನತು ಮಾಡಿ, ಮಾನಸಿಕ ಹಿಂಸೆ ನೀಡಿ, ಅವೈಜ್ಞಾನಿಕ ವಿಚಾರಣೆ ನಡೆಸಿದ್ದು, ಅನ್ಯಾಯವಾಗಿ ಬಲಿ ಪಶು ಮಾಡುವ ಕಾರ್ಯ ಹಾಗೂ ವೇತನ ಶ್ರೇಣಿಗಳ ಶಾಶ್ವತ ಕಡಿತದ ಶಿಕ್ಷೆಯನ್ನು ಕೆಲ ಸಿಬ್ಬಂದಿಗಳು ಅನುಭವಿಸುವಂತೆ ಅಧಿಕಾರಿ ವರ್ಗ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಇನ್ನು ಅಧಿಕಾರಿಗಳ ನಿರ್ಲಕ್ಷ್ಯ ಇದ್ದರು ಸಹ ಅಧಿಕಾರದ ಬಲದಿಂದ ಕೇವಲ ಸಿಬ್ಬಂದಿಗಳನ್ನು ಮಾತ್ರ ಬಲಿ ಪಶು ಮಾಡಿ ಬೆಣ್ಣೆಯಲ್ಲಿನ ಕೂದಲು ತೆಗೆದಂತೆ ಪಾರು ಆಗುವ ತಂತ್ರಗಾರಿಕೆ ಒಂದು ಕಡೆ. ಒಟ್ಟಿನಲ್ಲಿ ಲೆಕ್ಕಪತ್ರ ಮೇಲ್ವಿಚಾರಕರ ಕೊರತೆಯಿಂದ ಬೀದರ್ ವಿಭಾಗದಲ್ಲಿ ಲೆಕ್ಕಪತ್ರ ಶಾಖೆಯ ಹಿಡಿತ ತಪಿದಂತಾಗಿದೆ.
ಇಂತಹ ಅವ್ಯವಹಾರ ಪ್ರಕರಣ ನಡೆಯುತ್ತಿರುವ ಕಾರಣ ಮುಂಬಡ್ತಿಯ ಮೇಲೆ ಸಿಬ್ಬಂದಿಗಳು ಸಹಾಯಕ ಲೆಕ್ಕಿಗ ಹುದ್ದೆಯಲ್ಲಿ ಮುಂಬಡ್ತಿ ಪಡೆಯಲು ಹೆದರುತ್ತಿದ್ದಾರೆ. ಒಂದು ಕಡೆ 10 , 15 ವರ್ಷಗಳ ನಂತರದಲ್ಲಿ ಸಿಕ್ಕ ಮುಂಬಡ್ತಿ ಪಡೆಯಬೇಕು ಎಂಬ ಆಸೆಗೆ ಬಿದ್ದು ಸಹಾಯಕ ಲೆಕ್ಕಿಗ ಮುಂಬಡ್ತಿ ಹುದ್ದೆ ಪಡೆದು ಕೆಲಸ ಮಾಡಲು ಇಚ್ಛಿಸಿದರೆ ಅಂತಹ ಸಿಬ್ಬಂದಿಗಳಿಗೆ ಅಧಿಕಾರಿ ವರ್ಗ ಮುಂಬಡ್ತಿ ಪಡೆದ ಹುದ್ದೆಯಲ್ಲಿ ಕೆಲಸ ನಿರ್ವಹಿಸಲು ಬಿಡದೇ ಪ್ರಭಾರ ಹುದ್ದೆ ಮೇಲೆ ನಿಯೋಜಿಸುವ ಕೆಲಸಕ್ಕೆ ಮುಂದಾಗುತ್ತಿದೆ.
ಅಲ್ಲದೆ ಅಧಿಕಾರ ಬಲದಿಂದ ಸಹಾಯಕ ಲೆಕ್ಕಿಗ ಹುದ್ದೆಯ ಕೆಲಸದ ಜತೆಗೆ ಲೆಕ್ಕಪತ್ರ ಮೇಲ್ವಿಚಾರಕ ಹುದ್ದೆಯ ಕೆಲಸವನ್ನು ಸಹ ಮಾಡಲು ಆದೇಶಿಸಿ ಕೆಲಸ ನಿರ್ವಹಿಸಲು ಆತಂಕ, ಭಯ ಹಾಗೂ ಮಾನಸಿಕ ಕಿರಿಕಿರಿ ನಿಡುತ್ತಿರುವ ಆರೋಪವು ಜೂನಿಯರ್ ಅಕೌಂಟ್ ಅಸಿಸ್ಟೆಂಟ್‌ಗಳ ಮೊಗಶಾಲೆಯಲ್ಲಿ ಕೇಳಿ ಬರುತ್ತಿದೆ.
ಇನ್ನು ಒತ್ತಡ ರಹಿತ ಕೆಲಸ ನಿರ್ವಹಣೆಯ ಮೂಲಕ ಸಿಬ್ಬಂದಿಗಳ ಆರೋಗ್ಯ ರಕ್ಷಿಸುತ್ತೇವೆ ಎಂದು ಹೇಳುವುದು ಒಂದು ಕಡೆ. ಒತ್ತಡ ನಿವಾರಣೆ ಮಾಡದೇ ಇರುವುದು ಇನ್ನೊಂದು ಕಡೆ.
ಇತ್ತ ಸಹಾಯಕ ಲೆಕ್ಕಿಗೆ ಮುಂಬಡ್ತಿ ಪಡೆಯಲು ಸಿಬ್ಬಂದಿಗಳು ಏಕೆ ಹೆದರುತ್ತಿದ್ದಾರೆ, ಇದಕ್ಕೆ ಪರಿಹಾರದ ಮಾರ್ಗೋಪಾಯ ಏನು? ಇತರ ವಿಭಾಗದಿಂದ ಲೆಕ್ಕಪತ್ರ ಮೇಲ್ವಿಚಾರಕರ ನೇಮಕಾತಿ ಅವಶ್ಯವೇ? ಸಿಬ್ಬಂದಿಗಳು ಈ ಭಯದಿಂದ ಹೊರ ಬರಲು ಏನು ಮಾಡಬೇಕು ಎಂಬ ವಿಷಯವನ್ನು ಚರ್ಚಿಸದೇ ಅನ್ಯಥಾ ಸಹಾಯಕ ಲೆಕ್ಕಿಗರ ಮೇಲೆ ಹೇರುತ್ತಿರುವ ಭಾರ ಉಚಿತವೇ ಎಂಬ ಅಳಲು ಅಥವಾ ಈ ಸಹಾಯಕ ಲೆಕ್ಕಿಗ ಹುದ್ದೆ ಬೀದರ್ ವಿಭಾಗದಲ್ಲಿ ಶಾಪವಾಗಿ ಪರಿಣಮಿಸಿತೇ ಎಂದು ಸಿಬ್ಬಂದಿಗಳು ಕೊರುಗುತ್ತಿದ್ದಾರೆ.
ಈ ವಿಷಯದಲ್ಲಿ ಅಧಿಕಾರಿ ವರ್ಗ ಸೂಕ್ತ ಕ್ರಮ ಕೈಗೊಂಡು ಸಹಾಯಕ ಲೆಕ್ಕಿಗ ಹುದ್ದೆಯವರಿಗೆ ಅನುಕೂಲಕರ ಕೆಲಸದ ವಾತಾವರಣ ನಿರ್ಮಿಸಬೇಕಾಗಿದೆ. ಇಲ್ಲ ಹಿಂಬಡ್ತಿಯ ಹಾದಿ ನೌಕರರು ಹಿಡಿಯಬೇಕೆ ಎಂಬುದನ್ನು ಅಧಿಕಾರಿಗಳೇ ನಿರ್ಣಯಿಸಬೇಕಿದೆ.
ಇನ್ನು ಅಧಿಕಾರಿಗಳ ಈ ಉದಾಸೀನ ನಡೆಯಿಂದ ಈಗ ಸಿಗುತ್ತಿರುವ ಮುಂಬಡ್ತಿಯನ್ನು ಕಳೆದುಕೊಳ್ಳಲು ಬಿದರ್ ವಿಭಾಗದ ಕಿರಿಯ ಲೆಕ್ಕ ಸಹಾಯಕರು ಸಿದ್ಧರಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು ನೋಡಿದರೆ ಅಲ್ಲಿ ಅಧಿಕಾರಿಗಳ ಕಿರುಕುಳ ಎಂಬ ಆರೋಪ ಕೇಳಿ ಬರುತ್ತಿದೆ. ಅದಷ್ಟೇ ಅಲ್ಲದೆ, ಸಹಾಯಕ ಲೆಕ್ಕಿಗರಾಗಿ ಮುಂಬಡ್ತಿ ಪಡೆದವರಿಗೆ ಡಿಪೋನಲ್ಲಿ ಮೂರುದಿನ ಕೆಲಸ, ಬೇರೆಡೆ ಮೂರು ದಿನ ಕೆಲಸ ಎಂಬ ಅವೈಜ್ಞಾನಿಕ ಕೆಲಸದ ಒತ್ತಡವನ್ನು ಹೇರುವ ತಂತ್ರವೂ ಅಧಿಕಾರಿಗಳು ಮಾಡುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಹೀಗಾಗಿ ಈ ಬಗ್ಗೆ ಕಕರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಚಪ್ಪ ಅವರು ಗಮನ ಹರಿಸಿ ಕೂಡಲೇ ಬೀದರ್ ವಿಭಾಗದಲ್ಲಿ ಕಿರಿಯ ಲೆಕ್ಕ ಸಹಾಯಕರು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕಿದೆ. ಅಲ್ಲದೆ ಇವರಿಗೆ ಮುಂಬಡ್ತಿ ನೀಡಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.