NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ಜ.24ರಂದು ವೇತನ ಶ್ರೇಣಿ  ಸೇರಿ ಒಟ್ಟು 13 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ  ಧರಣಿ: ಚಂದ್ರಕಾಂತ ಗದ್ದಗಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ : ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ 13 ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ ಜ. 24 ರಂದು ರಾಜ್ಯದ ಸಾರಿಗೆ ನಿಗಮಗಳ ಎಲ್ಲ ವಿಭಾಗೀಯ ಕಚೇರಿ ಮತ್ತು ಕಲಬುರಗಿ, ಹುಬ್ಬಳ್ಳಿಯ ಕೇಂದ್ರ ಕಚೇರಿ ಹಾಗೂ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ  ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾ ಮಂಡಳದ ಕಲ್ಯಾಣ ಕರ್ನಾಟಕ ವಲಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ನಮ್ಮ ಬೇಡಿಕೆಗಳ ಈಡೇರಿಕೆ ಸಂಬಂಧ ಸಂಘಟನೆಗಳ ಸಭೆ ಕರೆದು ಕೈಗಾರಿಕಾ ಒಪ್ಪಂದದಂತೆ ಬೇಡಿಕೆ ಈಡೇರಿಸಬೇಕು ಎಂದು ವಿನಂತಿಸಲಾಗಿದೆ. ಆದರೆ ಇನ್ನೂ ಸ್ಪಂದಿಸಿಲ್ಲ. ಹೀಗಾಗಿ ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ನಾವು ಧರಣಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ. ಸರ್ಕಾರವೇ ನಾವು ಹೋರಾಟಕ್ಕೆ ಇಳಿಯುವಂತೆ ಮಾಡುತ್ತಿದೆ ಎಂದ ಅವರು, ಧರಣಿ ಸತ್ಯಾಗ್ರಹ ಅನಿವಾರ್ಯವಾಗಿದ್ದು ಜನರು ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಆಡಳಿತ ವರ್ಗ ಕಳೆದ 30-11-2022 ರಂದು ನಮ್ಮ ಜಂಟಿ ಕ್ರಿಯಾ ಸಮಿತಿಯ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ, ಸರ್ಕಾರದಿಂದ ನಿರ್ದೇಶನ ಬಂದ ನಂತರ ನಿಮ್ಮೊಡನೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿತ್ತು. ಆದರೆ ಈವರೆಗೂ ಅದು ಸಫಲವಾಗಿಲ್ಲ.

ಈಗಾಗಲೇ ಸಾರಿಗೆ ನೌಕರರ ವೇತನ ಹೆಚ್ಚಳದ ವಿಷಯ ಸುಮಾರು 37 ತಿಂಗಳು ವಿಳಂಬವಾಗಿದೆ. ಇದರಿಂದಾಗಿ ಸಾರಿಗೆ ನೌಕರರಲ್ಲಿ ಸಾಕಷ್ಟು ಅಶಾಂತಿ, ಆಕ್ರೋಶ ಮೂಡಿದೆ. ಜನವರಿ 23 ರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಜ. 24 ರಂದು ಅನಿವಾರ್ಯವಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು.

ಪರಿಷ್ಕೃತ ವೇತನ ನೀಡಬೇಕು: ಮೂಲ ವೇತನಕ್ಕೆ ಡಿಎ ವಿಲೀನಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ.25ರಷ್ಟು ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ಧಪಡಿಸಬೇಕು. ಇಂಕ್ರಿಮೆಂಟ್‌ ದರ ಪರಿಷ್ಕೃತ ಮೂಲ ವೇತನದ ಶೇ.3ರಷ್ಟು ಹೆಚ್ಚಿಸಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಹ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಪಿಂಚಣಿ ಯೋಜನೆ ಜಾರಿಯಾಗಬೇಕು: ಭವಿಷ್ಯ ನಿಧಿ ಪಿಂಚಣಿ ಬದಲು ಸಂಸ್ಥೆಯೇ ತನ್ನ ಎಲ್ಲ ನಿವೃತ್ತ ನೌಕರರಿಗೂ ಸೂಕ್ತವಾದ, ತುಟ್ಟಿ ಭತ್ಯೆಗೆ ಸರಿಯಾದ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಗ್ರಾಚ್ಯುಯಿಟಿ ಸಂಬಂಧ ಸಂಖ್ಯೆ 1274 ಸುತ್ತೋಲೆಯನ್ನು ರದ್ದುಪಡಿಸಿ ಕೈಗಾರಿಕಾ ಒಪ್ಪಂದಗಳ ಪ್ರಕಾರ ಎಲ್ಲ ಕಾರ್ಮಿಕರಿಗೂ ಗ್ರಾಚ್ಯುಯಿಟಿ ಪಾವತಿಸಬೇಕು.

ಖಾಸಗೀಕರಣ ನಿರ್ಧಾರ ಕೈಬಿಡಿ: ರಾಜ್ಯ ಸರ್ಕಾರ ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಖಾಸಗಿಯವರಿಗೆ ವಹಿಸಲು ಉದ್ದೇಶಿಸಿರುವ ಮಾರ್ಗಗಳನ್ನು ಸಾರಿಗೆ ನಿಗಮಗಳಲ್ಲೇ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಆಧಾರದ ಸಿಬ್ಬಂದಿ ನಿಯೋಜನೆ ಸಲ್ಲ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳ ನೇಮಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ನಾಲ್ಕು ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಮಾ ಮೊತ್ತ ಸಂಸ್ಥೆಯೇ ಭರಿಸಲಿ: ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ವಿಮಾ ಮೊತ್ತವನ್ನು ನೌಕರರ ವೇತನದಿಂದ ಕಡಿತ ಮಾಡುವುದನ್ನು ನಿಲ್ಲಿಸಿ, ಆ ಮೊತ್ತವನ್ನು ಸಂಸ್ಥೆ ಭರಿಸುವುದು ಹಾಗೂ ಈಗಾಗಲೇ ನೌಕರರ ವೇತನದಿಂದ ಕಡಿತ ಮಾಡಿರುವ ಸದರಿ ವಿಮಾ ಮೊತ್ತವನ್ನು ಆಯಾ ನೌಕರರಿಗೆ ಮರು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಿದ್ದಪ್ಪ ಪಾಲ್ಕಿ, ಶಿವಶಾಂತ ಮುನ್ನೊಳ್ಳಿ, ರಾಮಚಂದ್ರ ಹೈಯಾಳಕರ್‌, ಪಿ.ಎಸ್‌. ಹಿಪ್ಪರಗಿ ಇತರರಿದ್ದರು.

Leave a Reply

error: Content is protected !!
LATEST
ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ