ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಸಾರಿಗೆ ಬಸ್‌ಗಳು ನಿಲ್ಲುತ್ತವಾ..? ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆಯೇ..? ಗೊತ್ತಿಲ್ಲ. ಆದರೆ ಇದೇ ಜ.30ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.
ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘವು ಎಲ್ಲ ನೌಕರರ ಸಂಘಟನೆಗಳ ಜತೆಗೆ ಇದೇ ಜ.30ರಿಂದ ಅನಿರ್ದಿಷ್ಟಾವಧಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಈ ಧರಣಿ ಸತ್ಯಾಗ್ರಹವನ್ನು ಫ್ರೀಡಂ ಪಾರ್ಕ್‌ನಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ಈ ಧರಣಿ ಸತ್ಯಾಗ್ರಹದಲ್ಲಿ ಸಾರಿಗೆ ನೌಕರರ ಎಲ್ಲ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿಗಳು ಸೇರಿದಂತೆ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಸಮಯದಲ್ಲಿ ವಜಾಗೊಳಿಸಿರುವ ನಾಲ್ಕೂ ನಿಗಮಗಳ ನೌಕರರನ್ನು ಯಾವುದೇ ಷರತ್ತು ಇಲ್ಲದೆ ವಾಪಸ್ ಕರ್ತವ್ಯಕ್ಕೆ ಮರು ನಿಯೋಜನೆ ಮಾಡಬೇಕು.
ಮುಷ್ಕರದ ಸಮಯದಲ್ಲಿ ನೌಕರರು ಮತ್ತು ಅವರ ಕುಟುಂಬದವರ ವಿರುದ್ಧ ದಾಖಲಾಗಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯಬೇಕು.
ಇನ್ನು ಕಳೆದ 2020ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆ ಮೂರು ವರ್ಷ ಕಳೆದು ನಾಲ್ಕನೇ ವರ್ಷಕ್ಕೆ ಕಾಲಿಟ್ಟರೂ ಸರ್ಕಾರ ಇನ್ನು ತುಟಿ ಬಿಚ್ಚಿಲ್ಲ. ಹೀಗಾಗಿ ಕೂಡಲೇ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಧರಣಿ ಸತ್ಯಾಗ್ರಹ ಮಾಡಲಾಗುತ್ತಿದೆ.
ನಮ್ಮ ಈ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಜಗದೀಶ್ ತಿಳಿಸಿದ್ದಾರೆ.