ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಕೋವಿಡ್ ಎರಡನೇ ಅಲೆ ವ್ಯಾಪಕವಾಗಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಆರೋಗ್ಯ ಸೇವೆ ಮತ್ತಷ್ಟು ಸುಧಾರಿಸಲು ಮತ್ತು ಆರೋಗ್ಯ ಇಲಾಖೆಗೆ ಅಗತ್ಯ ವೈದ್ಯಕೀಯ ಉಪಕರಣಗಳ ಒದಗಿಸುವ ಸಲುವಾಗಿ ಮಂಡಳಿಯಿಂದ 2021-22 ನೇ ಸಾಲಿಗೆ 100 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ತಿಳಿಸಿದ್ದಾರೆ.
ಶುಕ್ರವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಮೊದಲನೇ ಅಲೆಯನ್ನು ಸಮರ್ಥವಾಗಿ ನಿರ್ವಹಣೆಗೆ ಮಂಡಳಿಯಿಂದ ಈ ಭಾಗದ 6 ಜಿಲ್ಲೆಗಳಲ್ಲಿ ಅತ್ಯಾಧುನಿಕ ಅಂಬುಲೆನ್ಸ್ ಖರೀದಿ ಸೇರಿದಂತೆ ಇನ್ನಿತರ ಕಾರ್ಯಕ್ಕೆ 10 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿತ್ತು ಎಂದರು.
ಪ್ರತಿ ಜಿಲ್ಲೆಯ ಜಿಲ್ಲಾಡಳಿತದೊಂದಿಗೆ ಅಲ್ಲಿನ ಅರೋಗ್ಯ ಸೇವೆಗಳ ಸ್ಥಿತಿಗತಿ ಜೊತೆಗೆ ವೆಂಟಿಲೇಟರ್, ಆಕ್ಸಿಜನ್ ವಾಸ್ತವದ ಸ್ಥಿತಿಗಳನ್ನು, ಸಮಸ್ಯೆಗಳ ಚರ್ಚಿಸಿ ಈ ವರ್ಷದಲ್ಲಿ 100 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಸಾಲಿನ ಮಂಡಳಿಯ ಕ್ರಿಯಾ ಯೋಜನೆಯಲ್ಲಿ ವಿಭಾಗದ 6 ಜಿಲ್ಲೆಗಳಿಗೆ ಕೋವಿಡ್ ನಿರ್ವಹಣೆಗಾಗಿ ಅಗತ್ಯವಾಗಿರುವ ವೈದ್ಯಕೀಯ ಉಪಕರಣಗಳನ್ನು ಮಂಡಳಿಯಿಂದ ಖರೀದಿಸಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕೋವಿಡ್-19 ನಿರ್ವಹಣೆಗಾಗಿ 2021-22ನೇ ಸಾಲಿನ ಮ್ಯಾಕ್ರೋ ಅನುದಾನದಡಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಬೀದರ ಜಿಲ್ಲೆಗೆ 1374.40 ಲಕ್ಷ ರೂ., ಕಲಬುರಗಿಗೆ 50 ಲಕ್ಷ ರೂ., ಯಾದಗಿರಿಗೆ 1933.85 ಲಕ್ಷ ರೂ., ರಾಯಚೂರಿಗೆ 3148.15 ಲಕ್ಷ ರೂ., ಕೊಪ್ಪಳ 2251.10 ಲಕ್ಷ ರೂ. ಹಾಗೂ ಬಳ್ಳಾರಿಗೆ 1538.40.ಲಕ್ಷ ರೂ. ಸೇರಿದಂತೆ ಒಟ್ಟು10295.90 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ ಎಂದು ವಿವರಿಸಿದ ಅವರು 2020-21ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಗೆ ಕೋವಿಡ್ ನಿರ್ವಹಣೆಗೆ 6.25 ಕೋಟಿ ರೂ. ಅನುದಾನ ನೀಡಲಾಗಿತ್ತು ಎಂದು ತಿಳಿಸಿದರು.
ತರಕಾರಿ ಮಾರುಕಟ್ಟೆ ಕೆಲಸ ಶೀಘ್ರ ಆರಂಭ
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ಎಂ.ಎಸ್.ಕೆ.ಮಿಲ್ ನ ಕಣ್ಣಿ ಮಾರ್ಕೆಟ್ ನಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡ್ಕರ್ ಇದ್ದರು.