NEWSನಮ್ಮರಾಜ್ಯ

ಪೊಲೀಸರು ಸ್ವಂತ ನಿರ್ಧಾರ ತೆಗೆದು ಕೊಳ್ಳಬೇಕು: ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ ಮೂರೂವರೆ ವರ್ಷದ ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಸಂಭವಿಸಿದ ಘಟನೆ ತಲೆತಗ್ಗಿಸುವಂತದ್ದು. ಘಟನೆ ಸಂಬಂಧ ಮೂವರು ಪೊಲೀಸರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.

ಮಂಡ್ಯದ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಲಿಲ್ಲ, ಸ್ವಂತಿಕೆ ಪ್ರದರ್ಶಿಸಲಿಲ್ಲ. ಸರಿಯಾಗಿ ನಡೆದುಕೊಳ್ಳಲಿಲ್ಲ. ಅವೈಜ್ಞಾನಿಕವಾಗಿ ಸವಾರರನ್ನು ತಡೆಯುವುದು ಬೇಡ.

ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತು ದಿಢೀರ್ ಎದುರು ತಡೆಯುತ್ತಾರೆ. ಪೊಲೀಸರು ಹೀಗೆ ಮಾಡಬಾರದು. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಅನುಸರಿಸಬೇಕು ಎಂದು ಪರಮೇಶ್ವರ್ ಖಡಕ್ ಸೂಚನೆ ನೀಡಿದರು.

ಇನ್ನು ವೇಗವಾಗಿ ಬರುವ ಬೈಕ್​ ಸವಾರರನ್ನು ಪೊಲೀಸರು ದಿಢೀರಾಗಿ ಎದುರು ಬಂದು ತಡೆಯುತ್ತಾರೆ. ಇದರಿಂದ ಸವಾರರು ವಿಚಲಿತರಾಗುತ್ತಾರೆ. ಈ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ಸರಿಯಾದ ಸೂಚನೆ ಕೊಡುತ್ತೇವೆ ಎಂದ ಅವರು, ಇತ್ತ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಬಿಡಲಿಲ್ಲ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮಂಡ್ಯದಲ್ಲಿ ಸೋಮವಾರ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುವ ವೇಳೆ ಬೈಕ್ ಸವಾರ ಪೊಲೀಸರ ಮುಂದೆ ನಿಲ್ಲಿಸಲು ಹೋಗಿ ಆಯತಪ್ಪಿ ಬಿದ್ದ ಕಾರಣ ಮೂರೂವರೆ ವರ್ಷ ಮಗುವಿನ ಮೇಲೆ ಕ್ಯಾಂಟಿನ್‌ ಹರಿದು ಮೃತಪಟ್ಟ ಘಟನೆ ಸಂಭವಿಸಿತ್ತು.

Megha
the authorMegha

Leave a Reply

error: Content is protected !!