ಮುಂಬೈ: ಸಾಲ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಮುಂಬೈ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚಂದಾ ಕೊಚ್ಚರ್ ಇಂದು ಬೈಕುಲ್ಲಾ ಮಹಿಳಾ ಜೈಲಿನಿಂದ ಬಿಡುಗಡೆ ಗೊಂಡರೆ, ಆರ್ಥರ್ ರೋಡ್ ಜೈಲಿನಿಂದ ದೀಪಕ್ ಕೊಚ್ಚರ್ ಕೂಡ ಬಿಡುಗಡೆಯಾಗಿ ಹೊರ ಬಂದಿದ್ದಾರೆ.
ಬಾಂಬೆ ಹೈಕೋರ್ಟ್ ಸೋಮವಾರ ಐಸಿಐಸಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಒಂದು ವಾರಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದ ನಂತರ ಇಬ್ಬರು ಪ್ರಸ್ತುತ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಂಡಿದ್ದಾರೆ.
ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಡಿಸೆಂಬರ್ 23, 2022 ರಂದು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು.
ವೇಣುಗೋಪಾಲ್ ಧೂತ್ ನೇತೃತ್ವದ ವಿಡಿಯೋಕಾನ್ ಗ್ರೂಪ್‌ಗೆ ಒದಗಿಸಿದ ಸಾಲದಲ್ಲಿನ ಅಕ್ರಮಗಳ ಆರೋಪದ ಮೇಲೆ ಸಿಬಿಐ ಅವರನ್ನು ಬಂಧಿಸಿತ್ತು. ಆದರೆ ಇದು ಕಾನೂನುಬಾಹಿರ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು.
ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಡಿಸೆಂಬರ್ 25 ರಂದು ಕೊಚ್ಚರ್ ಅವರನ್ನು ಬಂಧಿಸಿತ್ತು. ಕೊಚ್ಚರ್‌ಗಳು ತಮ್ಮ ಮಗನಿಗೆ ಇದೇ ತಿಂಗಳು ವಿವಾಹವಾಗಲಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವನ್ನು ಕೋರಿದ್ದರು.
ವಿಚಾರಣೆ ವೇಳೆ ಚಂದಾ ಕೊಚ್ಚರ್ ಅವರು ತಮ್ಮ ವಕೀಲರಾದ ರೋಹನ್ ದಾಕ್ಷಿಣಿ ಮತ್ತು ಕುಶಾಲ್ ಮೋರ್ ಅವರ ಮೂಲಕ ಸಿಬಿಐ ಬಂಧನವು ನಿರಂಕುಶ ಮತ್ತು ಕಾನೂನುಬಾಹಿರ ಎಂದು ಹೇಳಿಕೆ ನೀಡಿದ್ದು, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 46 (4) ರ ಅಡಿಯಲ್ಲಿ ತನ್ನನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಂಧನದ ವೇಳೆ ಮಹಿಳಾ ಪೊಲೀಸ್ ಅಧಿಕಾರಿ ಇರಲಿಲ್ಲ. ಚಂದಾ ಅವರ ಬಂಧನದ ಜ್ಞಾಪಕ ಪತ್ರದಲ್ಲಿ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿಯ ಹೆಸರು ಇಲ್ಲ ಎಂದು ಸಲ್ಲಿಸಲಾಗಿದೆ.
ಆದಾಗ್ಯೂ, ಮಹಿಳೆ ಅಧಿಕಾರಿ ಹಾಜರಿಲ್ಲದ ವಿಷಯದ ಬಗ್ಗೆ ಸಿಬಿಐ ಹೇಳಿದ್ದು ಹೀಗೆ, “ಇದು ವೈಟ್ ಕಾಲರ್ ಅಪರಾಧ, ಅವರನ್ನು ಕೈಕೋಳ ಹಾಕಿ ತೆಗೆದುಕೊಂಡಿಲ್ಲ, ಆದ್ದರಿಂದ ಯಾವುದೇ ಸ್ಪರ್ಶವಿರಲಿಲ್ಲ ಎಂದಿದೆ. ಆದರೆ ಈ ವೇಳೆ ಚಂದಾ ಪರ ವಕೀಲರು, ಸ್ಪರ್ಶದಿಂದ ಬಂಧನವಾಗಿದೆ ಎಂದು ತಿರುಗೇಟು ನೀಡಿದ್ದರು.